ಮಹಾ ರಾಜಕೀಯ ಬಿಕ್ಕಟ್ಟು – ಸರ್ಕಾರ ಬೀಳುವ ಸೂಚನೆ ನೀಡಿದ ಸಂಜಯ್ ರಾವತ್…
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿರುವಂತೆಯೇ ಸರ್ಕಾರ ಪತನಗೊಳ್ಳುವ ಸುಳಿವನ್ನು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಬುಧವಾರ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಂಜಯ್ ರಾವತ್ ಅವರು, ಪ್ರಸ್ತುತದ ಮಹಾರಾಷ್ಟ್ರ ರಾಜ್ಯದ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುವಂತೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ್ ಶಿಂಧೆ ಬಂಡಾಯವೆದ್ದಿದ್ದು, ಅವರ ಜೊತೆ 26 ಕ್ಕೂ ಹೆಚ್ಚು ಶಾಸಕರು ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದಾರೆ. ಇದೀಗ ರೆಬೆಲ್ ಶಾಸಕರನ್ನ ಸೂರತ್ನಿಂದ ಅಸ್ಸಾಂಗೆ ಸ್ಥಳಾಂತರಿಸಲಾಗಿದೆ.
ಪಕ್ಷದ 40 ಶಾಸಕರು ನನ್ನೊಂದಿಗೇ ಇದ್ದು, ಎಲ್ಲರೂ ಅಸ್ಸಾಂ ತಲುಪಿದ್ದಾರೆ. ಬಾಳ ಸಾಹೇಬ್ ಠಾಕ್ರೆಯ ಹಿಂದುತ್ವವನ್ನು ನಾವು ಪಾಲಿಸುತ್ತಿದ್ದೇವೆ. ಮುಂದೆಯೂ ಸಹ ಪಾಲಿಸುತ್ತೇವೆ. ಬಾಳ ಸಾಹೇಬ್ ಠಾಕ್ರೆಯ ಶಿವಸೇನೆಯನ್ನು ನಾವು ತೊರೆದಿಲ್ಲ, ಮುಂದೆಯೂ ತೊರೆಯುವುದೂ ಇಲ್ಲ ಎಂದು ಶಿವಸೇನೆ ನಾಯಕ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ.