ಇರಾನಿ ಕಪ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಸರ್ಫರಾಜ್ ಖಾನ್ ದ್ವಿ ಶತಕ ಸಿಡಿಸಿ ಮಿಂಚಿದ್ದಾರೆ.
ಈ ಪಂದ್ಯದಲ್ಲಿ ಮುಂಬಯಿರ ಪರ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ 253 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದಾರೆ. ಪರಿಣಾಮ ಮುಂಬಯಿ ತಂಡ ಶೇಷ ಭಾರತದ ವಿರುದ್ಧ 537 ರನ್ ಗಳಿಸಿ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಸರ್ಫರಾಜ್ ಖಾನ್ 222 ರನ್ ಗಳಿಸಿ ಔಟ್ ಆಗದೆ ಉಳಿದಿದ್ದಾರೆ.
ಟಾಸ್ ಗೆದ್ದ ಶೇಷ ಭಾರತ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಹೀಗಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಮುಂಬಯಿ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಪೃಥ್ವಿ ಶಾ (4) ಹಾಗೂ ಆಯುಷ್ (19) ಬೇಗನೆ ವಿಕೆಟ್ ಒಪ್ಪಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ತಮೋರೆ (0) ಶೂನ್ಯಕ್ಕೆ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ಹಾಗೂ ನಾಯಕ ಅಜಿಂಕ್ಯ ರಹಾನೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು.
84 ಎಸೆತಗಳಲ್ಲಿ 57 ರನ್ ಗಳಿಸಿ ಶ್ರೇಯಸ್ ಅಯ್ಯರ್ ಔಟಾದರು. ಈ ಸಂದರ್ಭದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಹಾನೆ ಜೊತೆಗೂಡಿ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಹೆಗಲೇರಿಸಿಕೊಂಡ ಯುವ ದಾಂಡಿಗ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು.
2ನೇ ದಿನದಾಟದ ಆರಂಭದಲ್ಲಿ ಅಜಿಂಕ್ಯ ರಹಾನೆ (97) ವಿಕೆಟ್ ಪಡೆಯುವಲ್ಲಿ ಯಶ್ ದಯಾಳ್ ಯಶಸ್ವಿಯಾಗಿದ್ದರು. ಇನ್ನೊಂದೆಡೆ ಸರ್ಫರಾಜ್ ಖಾನ್ ಉತ್ತಮ ಬ್ಯಾಟಿಂಗ್ ಮಾಡಿ ತಂಡದ ಮೊತ್ತವನ್ನು 500ರ ಗಡಿ ದಾಟಿಸಿದರು. ಈ ದ್ವಿಶತಕದ ಮೂಲಕ ಇರಾನಿ ಕಪ್ ನಲ್ಲಿ ಮುಂಬಯಿ ಪರ ದ್ವಿಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.