ಸರ್ಜಾ ಕುಟುಂಬದ ಶಾಪ ಈ ಜನ್ಮದಲ್ಲಿ ಮುಗಿಯುವಂಥದ್ದಲ್ಲವೇನೋ! ಉಜ್ವಲ ಭವಿಷ್ಯವಿದ್ದ ಪ್ರತಿಭಾವಂತರು ಅರೆ ಆಯಸ್ಸಿನಲ್ಲೇ ಎದ್ದು ನಡೆದೇಬಿಟ್ಟರು! ಈ ಸಾವು ನ್ಯಾಯವೇ?
“
ಸಾವು ಶಾಶ್ಚತ ಸತ್ಯ” ಎನ್ನುವ ನಮಗೆಲ್ಲರಿಗೂ ಗೊತ್ತಿರುವ, ನಾವು ಒಪ್ಪಲೇಬೇಕಿರುವ ಆಧ್ಯಾತ್ಮಿಕ, ಆತ್ಯಂತಿಕ ಸತ್ಯ. ಆದರೆ ಕೆಲವರ ಸಾವು ನಮಗೆ ವಿನಾಕಾರಣ ಅತ್ಯಂತ ನೋವು ತರಿಸಿಬಿಡುತ್ತದೆ. ನಿನ್ನೆ ಇಹಲೋಕದ ಯಾತ್ರೆ ಮುಗಿಸಿದ ಸ್ಫುರದ್ರೂಪಿ ನಟ, ಸರ್ಜಾ ಕುಟುಂಬದ ಮೂರನೆಯ ತಲೆಮಾರಿನ ನಟ ಚಿರಂಜೀವಿ ಸರ್ಜಾ ಸಾವು ಅಂತಹ ಸಾವುಗಳಲ್ಲಿ ಒಂದು. ಹಾಗೇ ನೋಡಿದರೆ ಚಿರುವಿಗೆ ಅಂತಹ ದೊಡ್ಡ ಸ್ಟಾರ್ ಡಂ ಇರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 11 ವರ್ಷ ಚಟುವಟಿಕೆಯಿಂದಿದ್ದ ಚಿರಂಜೀವಿ 22 ಚಿಲ್ಲರೆ ಸಿನಿಮಾಗಳಲ್ಲಿ ನಟಿಸಿದವರು. ಅವರ ಬಹುತೇಕ ಸಿನಿಮಾಗಳು ಹಾಕಿದ ಹಣಕ್ಕೆ ಮೋಸವಿಲ್ಲವೆಂಬಂತೆ ಆ್ಯವರೇಜ್ ಹಿಟ್ ಕೊಟ್ಟಂತಹ ಚಿತ್ರಗಳೇ.
ತಮ್ಮ ಧೃವನಿಗಿರುವ ಹಾರ್ಡ್ ಕೋರ್ ಮಾಸ್ ಫ್ಯಾನ್ ಫಾಲೋವರ್ಸ್ ಚಿರುಗೆ ಇರಲಿಲ್ಲ. ಆದರೆ ಇದೆಲ್ಲದರ ಹೊರತಾಗಿ ಚಿರುವಿನ ಅಕಾಲಿಕ ಸಾವು ಕನ್ನಡ ಸಿನಿಮೋದ್ಯಮವನ್ನು ಕಾಡುತ್ತಿದೆ, ಅಸಂಖ್ಯ ಕನ್ನಡಿಗರನ್ನು ಅಳಿಸುತ್ತಿದೆ. ಕೇವಲ 39 ವರ್ಷವಷ್ಟೇ ಬದುಕಿದ ಚಿರು ಸರ್ಜಾಗೆ ಅದ್ಭುತವಾದ ಭವಿಷ್ಯವಿತ್ತು, ಕಾರಣ ಚಿರು ತಯಾರಾಗಿದ್ದು ಮಾವ ಅರ್ಜುನ್ ಸರ್ಜಾ ಗರಡಿಯಲ್ಲಿ. ಚಿರು-ಮೇಘನಾ ಜೋಡಿ ಸ್ಯಾಂಡಲ್ ವುಡ್ ನ ಕಲರ್ ಫುಲ್ ಸಿನಿದಂಪತಿಗಳಾಗಿದ್ದರು. 10 ವರ್ಷ ಪ್ರೀತಿಸಿ, ಮನೆಯವರನ್ನು ಕಷ್ಟಪಟ್ಟು ಒಪ್ಪಿಸಿ ಮದುವೆಯಾದ ಚಿರು ಸರಿಯಾಗಿ 2 ವರ್ಷ ಸಂಸಾರ ಮಾಡಲಾಗಲಿಲ್ಲ. ಈಗ ಪತ್ನಿ ಮೇಘನಾ ರಾಜ್ 4 ತಿಂಗಳ ಗರ್ಭಿಣಿ, ಮಗುವಿನ ಮುಖವನ್ನೂ ನೋಡದೆ ಚಿರು ಹೊರಟುಬಿಟ್ಟ.
ಕೈನಲ್ಲಿ ನಾಲ್ಕು ಸಿನಿಮಾಗಳಿದ್ದವು, ಲಾಕ್ ಡೌನ್ ಸಮಯದಲ್ಲಿ ಬಿಡುಗಡೆಯಾದ ಶಿವಾರ್ಜುನ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಏಪ್ರಿಲ್, ಕ್ಷತ್ರಿಯ ಎಂಬ ಎರಡು ಸಿನಿಮಾಗಳು ಚಿರು ಬದುಕಿಗೆ ಬ್ರೇಕ್ ನೀಡುವ ಸಾಧ್ಯತೆಯಿತ್ತು. ಆದ್ರೆ ವಿಧಿ ಎಣಿಕೆ ಬೇರೆಯದೇ ಆಗಿತ್ತು. ಚಿರು ಮತ್ತೆ ಮರಳಿ ಬಾರದ ದೂರದೂರಿಗೆ ಹೊರಟು ಬಿಟ್ಟ. ಚಿರು ತನ್ನ ಸ್ನೇಹಶೀಲ, ನಿಗರ್ವಿ, ಸರಳ, ಸಜ್ಜನಿಕೆಯ ಗುಣದಿಂದ ಸ್ಯಾಂಡಲ್ ವುಡ್ ನಲ್ಲಿ ಅನೇಕರ ನಿಕಟ ಸ್ನೇಹಕ್ಕೆ ಪಾತ್ರವಾಗಿದ್ದವನು, ಇಂತದ್ದೇ ಕೆಲವು ಕಾರಣಗಳಿಂದ ಚಿರು ಸಾವು ಒಂದು ಮಟ್ಟಿಗಿನ ಶೂನ್ಯ ಸೃಷ್ಟಿಸಿದೆ.
ಚಿರುವನ್ನು ನಾನು ಮೊದಲು ನೋಡಿದ್ದು 2011ರಲ್ಲಿ. ಕೆಆರ್ ರಸ್ತೆಯಲ್ಲಿ ಗಂಗಾಂಬಿಕೆ ದೇವಸ್ಥಾನದ ರಸ್ತೆ ಎಂದು ಕರೆಯಲಾಗುವ ಅಡ್ಡ ರಸ್ತೆಯ ಎರಡನೇ ಕ್ರಾಸಿನಲ್ಲಿ ಶಾಸ್ತ್ರಿನಗರವಿದೆ. ಶಕ್ತಿಪ್ರಸಾದ್ ಮನೆಯ ಪಕ್ಕದ ಕಟ್ಟಡದಲ್ಲಿ ಚಿಕ್ಕಪ್ಪ ಪಿಜಿ ಮಾಡಿಕೊಂಡಿದ್ದ. ಚಿಕ್ಕಪ್ಪನ ಪಿಜಿ ಕಡೆಗೆ ಹೋದಾಗಲೆಲ್ಲಾ ಚಿರು, ಧೃವ ಯಾರಾದರೊಬ್ಬರು ಕಾಣಿಸುತ್ತಿದ್ದರು. ಅದಾಗಲೇ ಚಿರುವಿನ ಎರಡು ಮೂರು ಸಿನಿಮಾಗಳು ಸದ್ದು ಮಾಡಿದ್ದವು. ಆದರೂ ಅವನಲ್ಲಿ ಇಗೋ ಹುಟ್ಟಿರಲಿಲ್ಲ. ಒಣ ಪ್ರತಿಷ್ಠೆ ಆಡಂಬರಗಳಿರಲಿಲ್ಲ. ಯಾರೇ ಕಂಡರೂ ಒಂದು ನಿರ್ಮಲವಾದ ನಗುವಿನೊಂದಿಗೆ ಎದುರಾಗುತ್ತಿದ್ದವನು ಚಿರು. ಚಿರು ಮತ್ತು ಧೃವ ಇಬ್ಬರೂ ಶಾಸ್ತ್ರಿನಗರ ಮನೆಮನೆಗಳಿಗೂ ಮನೆಮಕ್ಕಳ ಹಾಗೆಯೇ ಬೆಳೆದರು.
ಮಾವ ಅರ್ಜುನ್ ಸರ್ಜಾ ಬರುತ್ತಾನೆಂದರೆ ಮಾತ್ರ ಆ ಮನೆಯಲ್ಲೊಂದು ಮೌನ ನೆಲೆಸುತ್ತಿತ್ತು. ಉಳಿದಂತೆ ಸದಾ ಕಾಲ ಲವಲವಿಕೆಯಿಂದ ತುಂಬಿರುತ್ತಿತ್ತು. ಹುಡುಗರು, ನಗು, ಹರಟೆ, ರಸ್ತೆಯಲ್ಲಿ ಶಟಲ್ ಬ್ಯಾಡ್ಮಿಂಟನ್, ಬೈಕುಗಳ ಗುರುಗುಟ್ಟಿವಿಕೆ ಇವೆಲ್ಲವೂ ಏರಿಯಾದಲ್ಲಿ ಕಳೆಗಟ್ಟುತ್ತಿತ್ತು. ಕೆ.ಆರ್ ರಸ್ತೆಯ ಸಿಗ್ನಲ್ ನಲ್ಲಿ ಒಂದು ಬಜಾಜ್ ಶೋರೂಂ ಇತ್ತು, ಅಲ್ಲಿ ಬೈಕನ್ನು ಸರ್ವೀಸ್ ಗೆ ಕೊಂಡೊಯ್ದಾಗ ಒಂದೆರಡು ಬಾರಿ ಚಿರು ಕಾಣಿಸಿಕೊಂಡಿದ್ದ. ಅಲ್ಲಿನ ರಸ್ತೆಗಳಲ್ಲಿ ಸಾದಾ ಸೀದ ಯುವಕನಂತೆ ದ್ವಿಚಕ್ರ ವಾಹನದಲ್ಲಿ ಓಡಾಡಿಕೊಂಡಿದ್ದ ಚಿರುವಿಗೆ ತಾನೊಬ್ಬ ಹೀರೋ ಅನ್ನುವ ಹಮ್ಮಿರಲಿಲ್ಲ. ಚಿರು ಮತ್ತು ಧೃವ ಇಬ್ಬರೂ ತಮಗೆ ಪರಿಚಯವಿರುವ ಹಿರಿಯರನ್ನೆಲ್ಲಾ ಮಾಮಾ ಎಂದೇ ಸಂಬೋಧಿಸಿ ಮಾತಾಡಿಸುತ್ತಿದ್ದರು. ಈ ಅಣ್ಣ ತಮ್ಮ ಇಬ್ಬರಲ್ಲೂ ಸಾಕಷ್ಟು ಸಾಮ್ಯತೆ ಇತ್ತು; ಅದಕ್ಕಿಂತ ಮಿಗಿಲಾದ ಅನನ್ಯ ಅನ್ಯೋನ್ಯತೆ ಇತ್ತು.
ಸರ್ಜಾ ಕುಟುಂಬ ಕನ್ನಡ ಸಿನಿಮಾ ಇಂಡಸ್ಟ್ರಿಯ ಹತಭಾಗ್ಯ ಕುಟುಂಬ ಅಂದರೆ ತಪ್ಪಾಗುವುದಿಲ್ಲವೇನೋ. ಇಮ್ಮಡಿ ಪುಲಿಕೇಶಿ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಖ್ಯಾತ ಖಳನಟ, ಪೋಷಕ ನಟ ಮಧುಗಿರಿಯ ಜಕ್ಕೇನಹಳ್ಳಿ ರಾಮಸ್ವಾಮಿ ಅಥವಾ ಶಕ್ತಿಪ್ರಸಾದ್ ಬದುಕಿದ್ದು 58 ವರ್ಷ ಮಾತ್ರ. ತಮ್ಮ ಸಿನಿ ಬದುಕಿನ 20 ವರ್ಷದಲ್ಲಿ ಬರೋಬ್ಬರಿ 200 ಚಿತ್ರಗಳಲ್ಲಿ ಅವರು ಅಭಿನಯಿಸಿದರು. ಇನ್ನೂ ಬಾಳಿ ಬದುಕಬೇಕಿದ್ದ ಶಕ್ತಿಪ್ರಸಾದ್ ಅರ್ಧ ಆಯುಷ್ಯದಲ್ಲೇ ಶಿವಸಾನಿಧ್ಯ ಸೇರಿಕೊಂಡರು.
ಸರ್ಜಾ ಕುಟುಂಬದ ಎರಡನೇ ತಲೆಮಾರಿನ ಶಕ್ತಿಪ್ರಸಾದ್ ಅವರ ಮೊದಲ ಮಗ ಕಿಶೋರ್ ಸರ್ಜಾ ಸಹ ಅದ್ಭುತ ಪ್ರತಿಭಾವಂತ. ಅಳಿಮಯ್ಯ, ಮಕ್ಕಳ ಸಾಕ್ಷಿ, ಜೋಡಿ, ತುತ್ತಾಮುತ್ತಾ, ಬಾವಬಾಮೈದದಂತಹ ಚಿತ್ರಗಳನ್ನು ನಿರ್ದೇಶಿಸಿದ ಕಿಶೋರ್ ಸರ್ಜಾ, ಚಿರಂಜೀವಿ ಸರ್ಜಾನ ಮೊತ್ತಮೊದಲ ಚಿತ್ರ ವಾಯುಪುತ್ರವನ್ನೂ ನಿರ್ದೇಶಿಸಿದವರು. 2009ರಲ್ಲಿ ಚಿರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವರ್ಷವೇ ದೊಡ್ಡ ಮಾವ ಕಿಶೋರ್ ಸರ್ಜಾ ತಮ್ಮ ಬದುಕನ್ನು ಮುಗಿಸಿ ನಡೆದಿದ್ದರು. ನಿರ್ದೇಶಕನಾಗಿ ಸಾಕಷ್ಟು ಭರವಸೆ ಮೂಡಿಸಿದ್ದ ಕಿಶೋರ್ ಬದುಕಿದ್ದು 50 ವರ್ಷಗಳಷ್ಟೇ. ಅಲ್ಲಿ ತುಮಕೂರಿನ ಮಧುಗಿರಿ ಹತ್ತಿರದ ಜಕ್ಕೇನಹಳ್ಳಿಯ ಶಕ್ತಿಪ್ರಸಾದ್ ಸಮಾಧಿ ಪಕ್ಕವೇ ಕಿಶೋರ್ ಮಲಗಿಬಿಟ್ಟರು.
ಇಂದಿಗೂ ತನ್ನ ವಯಸ್ಸನ್ನೇ ಮುಚ್ಚಿಟ್ಟುಕೊಂಡಂತೆ ನವಯುವಕನಂತೆ ನಳನಳಿಸುವ ಅರ್ಜುನ್ ಸರ್ಜಾ ಕೂಡಾ ಕನ್ನಡದಲ್ಲಿ ಬೆಳೆಯಬೇಕಾಗಿತ್ತು. ಆದರೆ ಗಾಂಧಿನಗರದ ಕ್ರಿಮಿಕೀಟಗಳ ಕಾಟದಿಂದ ತಮಿಳಿಗೆ ವಲಸೆ ಹೋಗಿ ಹೆಸರು ಮಾಡಿದರು. ಕನ್ನಡದ ಮೇಲಿನ ಪ್ರೀತಿಯಿಂದ ಆಗೊಂದು ಈಗೊಂದು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವ ಅರ್ಜುನ್ ವಿರುದ್ಧ ಮೀ ಟೂ ಆರೋಪ ಮಾಡಿ ಅವರ ನೆಮ್ಮದಿ ಕೆಡಿಸಲಾಯ್ತು. ಅದರಿಂದ ಯಾರಿಗೆ ಪ್ರಯೋಜನವಾಯ್ತೋ ಗೊತ್ತಿಲ್ಲ. ಬಹಳಷ್ಟು ಜನರಿಗೆ ಗೊತ್ತಿಲ್ಲ, ಕನ್ನಡದ ಕಲಾತಪಸ್ವಿ ರಾಜೇಶ್, ಅರ್ಜುನ್ ಸರ್ಜಾ ಅವರ ಮಾವ. ಸರ್ಜಾ ಕುಟುಂಬದ ಮೂರೂ ತಲೆಮಾರು ಕನ್ನಡ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದೆ.
ಚಿರಂಜೀವಿ ಸರ್ಜಾ ಪ್ರೀತಿಸಿ ಮದುವೆಯಾದ ನಟಿ, ಗಾಯಕಿ ಮೇಘನಾ ರಾಜ್ ಅಪ್ಪ ಕನ್ನಡದ ಹೆಸರಾಂತ ಪೋಷಕ ನಟ, ಹಾಸ್ಯ ನಟ ಮತ್ತು ಖಳನಟ ಎಂದು ಹೆಸರು ಮಾಡಿರುವ ರಂಗಭೂಮಿ ಹಿನ್ನೆಲೆಯ ಸುಂದರ್ ರಾಜ್. ಮೇಘನಾ ಅಮ್ಮ ಪ್ರಮೀಳಾ ಜೋಶಾಯ್ ಸಹ ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ದೊಡ್ಡ ಹೆಸರು ಮಾಡಿರುವವರೇ. ಹೀಗಿದ್ದರೂ ಸರ್ಜಾ ಕುಟುಂಬಕ್ಕೆ ತಟ್ಟಿದ ಶಾಪ ಮಾತ್ರ ಸದ್ಯಕ್ಕೆ ಮುಗಿಯುವಂಥದ್ದಲ್ಲವೇನೋ. ಮಾವ ಅರ್ಜುನ್ ಸರ್ಜಾ ತಮ್ಮ ಸಿನಿ ಬದುಕಿನಲ್ಲಿ ಹೇಗೆ ಗೆರೆ ಹಾಕಿಕೊಂಡು ಮೀರದೇ ಬದುಕುತ್ತಿದ್ದಾರೋ, ತಾತ ಶಕ್ತಿಪ್ರಸಾದ್ ಹೇಗೆ ಬದುಕಿದ್ದರೋ ಹಾಗೆಯೇ ಬದುಕಿದವನು ಚಿರು. ಮಾವನಂತೆ ಸ್ಫುರದ್ರೂಪಿ, ಕಟ್ಟುಮಸ್ತು ದೇಹ, ಮಾವನಂತೆಯೇ ದೈಹಿಕ ಕಸರತ್ತಿಗೆ ಹೆಚ್ಚಿನ ಒತ್ತು ಕೊಟ್ಟವನು ಚಿರು, ಮಾವನಂತೆಯೇ ಸದಾ ನಗುಮೊಗದ ನಿಗರ್ವಿ. ಅರ್ಜುನ್ ಸರ್ಜಾ ಜೊತೆಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ನಂತರ ಹೀರೋ ಆದವನು ಚಿರು.
ಹೀಗಾಗಿ ಅಳಿಯನಲ್ಲಿ ಒಂದು ಶಿಸ್ತನ್ನು ಬೆಳೆಸಲು ಪ್ರಯತ್ನಿಸಿದ್ದರು ಅರ್ಜುನ್. ತಾನೇ ಮುಂದೆ ನಿಂತು 2 ವರ್ಷಗಳ ಹಿಂದೆ ಮದುವೆ ಮಾಡಿಸಿದ ಪ್ರೀತಿಯ ಅಳಿಯ ಈಗ ಗಾಜಿನ ಪೆಟ್ಟಿಗೆಯಲ್ಲಿ ಮಲಗಿರುವುದನ್ನು ನೋಡಿ ಹೇಗೆ ಸಹಿಸಿಕೊಳ್ಳಬೇಕು ಆ ಜೀವ. “ಚಿರು… ಮಾವ ಬಂದಿದೀನಿ ನೋಡೋ” ಎಂದು
ಗೋಳಾಡುವ ಅರ್ಜುನ್ ಸಂಕಟ, ಹತಾಶೆ, ನೋವು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲದ್ದು. ಉಜ್ವಲ ಭವಿಷ್ಯವಿದ್ದ ಯುವಸಾಮ್ರಾಟ್ ಚಿರು ಹೀಗೆ ಮಧ್ಯದಲ್ಲಿ ನಡೆದೇಬಿಡುತ್ತಾನೆ ಎಂದು ಆ ಮಾವನಿಗಾದರೂ ಹೇಗೆ ಗೊತ್ತಿರಬೇಕು? ನಿನ್ನಾತ್ಮಕ್ಕೆ ಶಾಂತಿ ಸಿಗಲಿ ಚಿರು.
– ವಿಭಾ (ವಿಶ್ವಾಸ್ ಭಾರದ್ವಾಜ್)








