ಸರ್ಕಾರ ಪತನವಾದರೆ ನೇರವಾಗಿ ಚುನಾವಣೆಗೆ ಹೋಗೋದೊಂದೇ ಗುರಿ : ಸತೀಶ್
ಬೆಳಗಾವಿ : ಸರ್ಕಾರ ಪತನವಾದರೆ ನೇರವಾಗಿ ಚುನಾವಣೆಗೆ ಹೋಗೋದೊಂದೇ ಗುರಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರಾಜೀನಾಮೆ ನೀಡುವುದರ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದು, ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಎಲ್ಲರನ್ನೂ ಒಟ್ಟಿಗೆ ಒಯ್ಯುವಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಫಲವಾಗಿರಬಹುದು.
ಕೊರೊನಾದಲ್ಲಿ ಸಮಸ್ಯೆ ಅಂತೂ ಇದ್ದೇ ಇದೆ, ಸರಿಯಾಗಿ ನಿರ್ವಹಣೆ ಮಾಡಲಾಗಿಲ್ಲ.
ರಾಜ್ಯದ ಜನತೆಗೆ ಎಲ್ಲವೂ ಗೊತ್ತಿದೆ. ವೈಯಕ್ತಿಕವಾಗಿ ಯಡಿಯೂರಪ್ಪ ಇದ್ದರೂ ಲಾಭ, ರಾಜೀನಾಮೆ ನೀಡಿದ್ರೂ ನಮ್ಮ ಪಕ್ಷಕ್ಕೆ ಲಾಭ ಇದ್ದೇ ಇದೆ.
ಬಿಎಸ್‍ವೈ ಸಿಎಂ ಆಗಿ ಮುಂದುವರೆದರೂ ಲಾಭ ಇದೆ. ಸಿಎಂ ಸ್ಥಾನದಿಂದ ಕೆಳಗಿಳಿದರೂ ಕಾಂಗ್ರೆಸ್‍ಗೆ ಲಾಭ ವಿದೆ ಎಂದರು.
ಇನ್ನು ಸುಮಾರು 6 ತಿಂಗಳಿಂದ ಸಿಎಂ ಬದಲಾವಣೆ ಚರ್ಚೆ ನಡೀತಿದೆ. ಬಹಳಷ್ಟು ಶಾಸಕರು ಸಹ ಸಿಎಂ ಬದಲಾವಣೆ ಹೇಳಿಕೆಗಳನ್ನು ಕೊಟ್ಟಿದ್ದಾರೆ.
ಬಹುಶಃ ಆ ಕಾಲ ಈಗ ಕೂಡಿ ಬಂದಿದೆ ಅನ್ನಿಸುತ್ತಿದೆ. ಏನೇ ಇದ್ದರೂ ಅದು ಬಿಜೆಪಿಯ ಆಂತರಿಕ ವಿಚಾರ.
ಯಾರು ಸಿಎಂ ಆಗ್ತಾರೋ ಬಿಡ್ತಾರೋ ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಹೊಸ ಮುಖ್ಯಮಂತ್ರಿ ಮಾಡೋದು ಕೂಡ ಅವರಿಗೆ ಬಿಟ್ಟಿದ್ದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.









