ಬೆಳಗಾವಿ: ಕೊರೊನಾ ಲಾಕ್ ಡೌನ್ ಹಿನ್ನೆಲೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗೆ ಸೂಕ್ತ ಬೆಲೆ, ಸಾಗಾಟ, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಯಮಕನಮರಡಿ ಶಾಸಕ ಸತೀಶ್ ಜಾರಕಿಹೊಳಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ನೆರವಿನ ಹಸ್ತ ಚಾಚಿದ್ದಾರೆ. ರೈತರಿಂದ ಯೋಗ್ಯ ದರದಲ್ಲಿ ತರಕಾರಿಗಳನ್ನು ಖರೀದಿಸಿ ಬಡ ಜನರಿಗೆ ವಿತರಿಸಲು ಮುಂದಾಗಿದ್ದಾರೆ.
ಹೌದು..! ಕೊರೊನಾ ಹಿನ್ನೆಲೆ ರೈತರು ಬೆಳೆದ ತರಕಾರಿಗಳನ್ನು ಖರೀದಿಸಲು ಯಾರೂ ಮುಂದಾಗುತ್ತಿಲ್ಲ. ಅಲ್ಲದೆ ಬೇರೆ ರಾಜ್ಯಗಳಿಗೆ ಕಳುಹಿಸಲು ಕೂಡ ಕಷ್ಟವಾಗಿದೆ. ಈ ಹಿನ್ನೆಲೆ ಸತೀಶ್ ಜಾರಕಿಹೊಳಿ ರೈತರ ತರಕಾರಿ ಖರೀದಿಗೆ ಮುಂದಾಗಿದ್ದಾರೆ. ಅಲ್ಲದೆ ಖರೀದಿಸಿದ ತರಕಾರಿಯನ್ನು ಬಡಜನರಿಗೆ ವಿತರಿಸುತ್ತಿದ್ದಾರೆ.
ಅದರಂತೆ ಯಮಕನಮರಡಿ ಮತಕ್ಷೇತ್ರದ ಕಡೋಲಿಯಲ್ಲಿ ರೈತರ ತರಕಾರಿಗಳನ್ನು ಜನರಿಗೆ ವಿತರಿಸುವ ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ರೈತರು ಆತಂಕಕ್ಕೆ ಒಳಪಡಬಾರದು. ಮಾನವೀಯತೆ ದೃಷ್ಟಿಯಿಂದ ರೈತರು ನೀಡುವ ತರಕಾರಿಗಳನ್ನು ಕೂಡ ಜನರಿಗೆ ತಲುಪಿಸಲಾಗುವುದು ಎಂದು ಹೇಳಿದರು.








