ಶಶಿಕಲಾ ಜೊಲ್ಲೆ ರಾಜೀನಾಮೆಗೆ ಸತೀಶ್ ಜಾರಕಿಹೊಳಿ ಆಗ್ರಹ
ಅಥಣಿ : ಶಶಿಕಲಾ ಜೊಲ್ಲೆ ಅವರಿಗೆ ನೈತಿಕತೆ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರಕಾರದಿಂದ ಹೊರ ಬರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಅಥಣಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಶಶಿಕಲಾ ಜೊಲ್ಲೆಯವರನ್ನು ಕೈ ಬಿಡದೇ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಸೇರ್ಪಡೆಗೊಳಿಸಿಕೊಂಡಿರುವುದು ಬಿಜೆಪಿಗೆ ನೈತಿಕತೆ ತೋರಿಸುತ್ತದೆ.
ಶಶಿಕಲಾ ಜೊಲ್ಲೆಯವರು ತಮ್ಮ ಮೊದಲಿನ ಖಾತೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದರು. ಆದರೂ ಕೂಡ ಅವರನ್ನು ಮಂತ್ರಿ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಇನ್ನು ಇದೇ ವೇಳೆ ರಮೇಶ ಜಾರಕಿಹೊಳಿಯವರ ನನಗೆ ಬಿಜೆಪಿಯಲ್ಲಿ ಹೆಚ್ಚು ಪ್ರೀತಿ ಸಿಕ್ಕಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ಅವರಿಗೆ ಎಷ್ಟು ಪ್ರೀತಿ ಸಿಕ್ಕಿದೆ, ಈಗಿನ ಪರಿಸ್ಥಿತಿ ಏನು ಎನ್ನುವುದು ನಮಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.









