ಇಡೀ ವಿಶ್ವವೇ ಬೆಚ್ಚಿಬೀಳುವಂತಹ ಸುದ್ದಿಯೊಂದು ಮಧ್ಯಪ್ರಾಚ್ಯದಿಂದ ಹೊರಬಿದ್ದಿದೆ. ದಶಕಗಳಿಂದ ಇರಾನ್‌ನ ಪರಮೋಚ್ಛ ನಾಯಕನಾಗಿ ಮೆರೆದಿದ್ದ, ಇಸ್ರೇಲ್ ಮತ್ತು ಅಮೆರಿಕದ ಪಾಲಿಗೆ ಕಂಟಕವಾಗಿದ್ದ ಆಯತುಲ್ಲಾ ಅಲಿ ಖಮೇನಿ ಯುಗ ಅಂತಿಮವಾಗಿ ಅಂತ್ಯಗೊಂಡಿದೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ಒಂದು ಕರಾರುವಾಕ್ ಮಿಲಿಟರಿ ಕಾರ್ಯಾಚರಣೆಯು ಟೆಹ್ರಾನ್‌ನ ಎದೆಯನ್ನೇ ನಡುಗಿಸಿದೆ. ಅತ್ಯಂತ ರಹಸ್ಯವಾಗಿ, ಅಷ್ಟೇ ನಿಖರವಾಗಿ ರೂಪಿಸಿದ ಸ್ಕೆಚ್ ಈಗ ಇತಿಹಾಸದ ಪುಟ ಸೇರಿದೆ.
ಶನಿವಾರವನ್ನೇ ದಾಳಿಗೆ ಆಯ್ಕೆ ಮಾಡಿಕೊಂಡಿದ್ದೇಕೆ? ಇದರ ಹಿಂದಿದೆ ರೋಚಕ ರಣತಂತ್ರ
ಸಾಮಾನ್ಯವಾಗಿ ಯುದ್ಧ ಅಥವಾ ದಾಳಿಗಳಲ್ಲಿ ಸಮಯದ ಆಯ್ಕೆ ಅತಿ ಮುಖ್ಯವಾಗಿರುತ್ತದೆ. ಇಸ್ರೇಲ್ ಈ ಬಾರಿ ಶನಿವಾರವನ್ನು ಆಯ್ಕೆ ಮಾಡಿಕೊಳ್ಳಲು ಬಲವಾದ ಕಾರಣವಿತ್ತು. ಯಹೂದಿಗಳಿಗೆ ಶನಿವಾರ ಪವಿತ್ರ ಸಬ್ಬತ್ ದಿನ. ಈ ದಿನದಂದು ಇಸ್ರೇಲ್ ದೊಡ್ಡ ಮಟ್ಟದ ಮಿಲಿಟರಿ ಕಾರ್ಯಾಚರಣೆ ನಡೆಸುವುದಿಲ್ಲ ಎಂಬುದು ಶತ್ರುಗಳ ಸಾಮಾನ್ಯ ಲೆಕ್ಕಾಚಾರವಾಗಿತ್ತು. ಇದೇ ನಂಬಿಕೆಯಲ್ಲಿ ಇರಾನ್ ಭದ್ರತಾ ಪಡೆಗಳು ತುಸು ನಿರಾಳವಾಗಿದ್ದವು. ಆದರೆ, ಶತ್ರುಗಳು ಮೈಮರೆತಿದ್ದ ಇದೇ ಸಮಯವನ್ನು ಇಸ್ರೇಲ್ ತನ್ನ ಅಸ್ತ್ರವನ್ನಾಗಿ ಬಳಸಿಕೊಂಡಿತು. ಅನಿರೀಕ್ಷಿತವಾಗಿ ಶನಿವಾರದ ಬೆಳಗ್ಗೆ ದಾಳಿ ನಡೆಸುವ ಮೂಲಕ ಇರಾನ್‌ಗೆ ಚೇತರಿಸಿಕೊಳ್ಳಲೂ ಅವಕಾಶ ನೀಡದಂತೆ ಏಟು ನೀಡಿದೆ.
ಖಮೇನಿ ಪ್ಲಾನ್ ಬದಲಿಸಿದ್ದು ಮುಳುವಾಯ್ತು
ಗುಪ್ತಚರ ವರದಿಗಳ ಪ್ರಕಾರ, ಅಲಿ ಖಮೇನಿ ಶನಿವಾರ ಸಂಜೆ ತಮ್ಮ ಆಪ್ತ ಸಲಹೆಗಾರರೊಂದಿಗೆ ಮಹತ್ವದ ಸಭೆ ನಡೆಸಬೇಕಿತ್ತು. ಆದರೆ, ಭದ್ರತಾ ದೃಷ್ಟಿಯಿಂದ ಕೊನೆ ಕ್ಷಣದಲ್ಲಿ ಅವರು ತಮ್ಮ ನಿರ್ಧಾರ ಬದಲಿಸಿ, ಶನಿವಾರ ಬೆಳಗ್ಗೆಯೇ ಸಭೆ ನಡೆಸಲು ತೀರ್ಮಾನಿಸಿದರು. ಈ ಬದಲಾವಣೆಯ ಮಾಹಿತಿ ಮೊಸಾದ್ ಮತ್ತು ಸಿಐಎ ಏಜೆಂಟರಿಗೆ ತಲುಪಿದ ತಕ್ಷಣವೇ ಆಪರೇಷನ್ ಟೆಹ್ರಾನ್ ಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಸಂಜೆಯವರೆಗೂ ಕಾಯ್ದಿದ್ದರೆ ಖಮೇನಿ ಸ್ಥಳ ಬದಲಿಸುವ ಅಥವಾ ಬಂಕರ್‌ಗೆ ತೆರಳುವ ಸಾಧ್ಯತೆ ಇತ್ತು. ಹೀಗಾಗಿ ಸಿಕ್ಕ ಅಲ್ಪ ಸಮಯದಲ್ಲೇ ಕಾರ್ಯಚರಣೆ ಮುಗಿಸಲು ನಿರ್ಧರಿಸಲಾಯಿತು.
ಆಕಾಶದಿಂದ ಉದರಿದ ಬೆಂಕಿ: ಧರೆಗುರುಳಿದ ಖಮೇನಿ ಸಾಮ್ರಾಜ್ಯ
ಟೆಹ್ರಾನ್‌ನ ಅತ್ಯಂತ ಹೈ-ಸೆಕ್ಯುರಿಟಿ ವಲಯದಲ್ಲಿರುವ ಖಮೇನಿಯವರ ಅಧಿಕೃತ ನಿವಾಸದ ಮೇಲೆ ನಡೆದ ವೈಮಾನಿಕ ದಾಳಿ ಎಷ್ಟೊಂದು ಭೀಕರವಾಗಿತ್ತೆಂದರೆ, ಇಡೀ ಕಟ್ಟಡ ಕ್ಷಣಾರ್ಧದಲ್ಲಿ ಮಣ್ಣುಗೂಡಿತು. ಬಂಕರ್ ಬಸ್ಟರ್ ಬಾಂಬ್‌ಗಳನ್ನು ಬಳಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ದಾಳಿಯ ತೀವ್ರತೆಗೆ ಕಟ್ಟಡದ ಅಡಿಪಾಯವೇ ಕದಲಿಹೋಗಿದ್ದು, ಖಮೇನಿ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿರಲಿಲ್ಲ ಎಂಬುದು ಸ್ಪಷ್ಟವಾಗಿದೆ.
ನೆತನ್ಯಾಹು ಕೈಸೇರಿತು ಸಾವಿನ ಸಾಕ್ಷ್ಯ
ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಇಸ್ರೇಲ್‌ನ ವಿಶೇಷ ಪಡೆಗಳು ಮತ್ತು ಗುಪ್ತಚರ ಇಲಾಖೆ ಕಾರ್ಯಪ್ರವೃತ್ತವಾದವು. ಸ್ಯಾಟಲೈಟ್ ಚಿತ್ರಗಳು ಕಟ್ಟಡ ಸಂಪೂರ್ಣ ನಾಶವಾಗಿರುವುದನ್ನು ದೃಢಪಡಿಸಿದವು. ನಂತರ ಅವಶೇಷಗಳ ಅಡಿಯಲ್ಲಿ ಖಮೇನಿಯವರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಖಮೇನಿಯವರ ಮೃತದೇಹದ ಫೋಟೋಗಳನ್ನು ನೇರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಕಳುಹಿಸಲಾಯಿತು. ಈ ಫೋಟೋಗಳನ್ನು ನೋಡಿ ಖಚಿತಪಡಿಸಿಕೊಂಡ ನಂತರವೇ ಈ ಸುದ್ದಿಯನ್ನು ಜಗತ್ತಿಗೆ ತಿಳಿಸಲು ನಿರ್ಧರಿಸಲಾಯಿತು.
ಟ್ರಂಪ್ ಖಚಿತಪಡಿಸಿದ ಸತ್ಯ
ಈ ಕಾರ್ಯಾಚರಣೆಯ ಯಶಸ್ಸಿನ ಸುದ್ದಿ ವಾಷಿಂಗ್ಟನ್‌ಗೂ ತಲುಪಿತು. ಇಸ್ರೇಲ್ ಪ್ರಧಾನಿಯಿಂದ ಅಧಿಕೃತ ಮಾಹಿತಿ ಸಿಕ್ಕ ಬಳಿಕ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಜಾಲತಾಣದಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಖಮೇನಿ ಯುಗಾಂತ್ಯವಾಗಿದೆ ಎಂದು ಅವರು ಘೋಷಿಸುವುದರೊಂದಿಗೆ, ಮಧ್ಯಪ್ರಾಚ್ಯದಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ ಎಂಬ ಸಂದೇಶವನ್ನು ರವಾನಿಸಿದರು.
ಒಟ್ಟಿನಲ್ಲಿ, ಖಮೇನಿಯನ್ನು ಮುಗಿಸಲು ಇಸ್ರೇಲ್ ಹಾಕಿದ್ದ ಖತರ್ನಾಕ್ ಸ್ಕೆಚ್ ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ. ಶನಿವಾರದ ಆ ಒಂದು ದಾಳಿ ಇರಾನ್‌ನ ಇತಿಹಾಸವನ್ನೇ ಬದಲಿಸಿದೆ.








