ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಆಪರೇಷನ್ ಕಮಲಕ್ಕೆ ಸಿಲುಕಿ ಕಮಲ್ ನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕರು ಬೆಂಗಳೂರಿನಲ್ಲಿರುವ ಮಾಹಿತಿ ಲಭ್ಯವಾಗಿದ್ದು, ಕೇಸರಿಪಡೆಗೆ ಟಕ್ಕರ್ ನೀಡಲು ಈ ಅಖಾಡಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಎಂಟ್ರಿ ಕೊಟ್ಟಿದ್ದಾರೆ.
ಹೌದು..! ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕರು ಒಟ್ಟಾಗಿದ್ದಾರೆ. ಹೈ ಕಮಾಂಡ್ ನ ಸೂಚನೆ ಮೇರಿಗೆ ಕೆಪಿಸಿಸಿ, ಕಮಲ್ ನಾಥ್ ಸರ್ಕಾರವನ್ನು ಉಳಿಸಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.
ಕಮಲನಾಥ್ ಸರ್ಕಾರ ಉಳಿಸಲು ಹುಲಿಯಾ ಟೀಂ ರೆಡಿ!
ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರು ತಮ್ಮ ಫೋನ್ ಆಫ್ ಮಾಡಿಕೊಂಡು ಬೆಂಗಳೂರಿನಲ್ಲಿರುವುದು ಗೊತ್ತಾಗುತ್ತಿದ್ದಂತೆ ಕಮಲ್ ನಾಥ್ ಅವರು ಕೆಪಿಸಿಸಿಗೆ ದೂರವಾಣಿ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ವಿಧಾನಸಭಾ ಲಾಂಜ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ಜತೆ ಚರ್ಚೆ ನಡೆದಿದೆ.
ಹುಲಿಯಾ ಸಿದ್ದರಾಮಯ್ಯಗೆ ಟ್ರಬಲ್ ಶೂಟರ್ ಸಾಥ್
ಸಿದ್ದರಾಮಯ್ಯ ಈ ವಿಚಾರವಾಗಿ ಕಾಂಗ್ರೆಸ್ ಕಟ್ಟಪ್ಪ ಡಿ.ಕೆ ಶಿವಕುಮಾರ್ ಅವರ ಜೊತೆಯೂ ಮಾತುಕತೆ ನಡೆಸಿದ್ದು, ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕರು ಎಲ್ಲಿದ್ದಾರೆ? ಎಂದು ಮಾಹಿತಿ ಸಂಗ್ರಹಿಸಲು ಸೂಚಿಸಿದ್ದಾರೆ. ಅಲ್ಲದೆ ಶತಾಯಗತಾಯ ಶಾಸಕರ ಜಾಡು ಪತ್ತೆ ಹಚ್ಚಿ ಕೇಸರಿ ಪಡೆಗೆ ಟಕ್ಕರ್ ಕೊಟ್ಟು, ಕಮಲ್ ನಾಥ್ ಸರ್ಕಾರ ಉಳಿಸಲೇಬೇಕೆಂದು ಕೈ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.