ಕಾವು ಪಡೆದುಕೊಳ್ಳುತ್ತಿದೆ #Save Lakshadveep ಅಭಿಯಾನ..!
ಕಳೆದ ಕೆಲವು ದಿನಗಳಿಂದ #Save Lakshadweepa ಎಂಬುದು ಟ್ರೆಂಡಿಂಗ್ ನಲ್ಲಿದೆ. ಅರಬ್ಬೀ ಸಮುದ್ರದಲ್ಲಿನ ಪುಟ್ಟ ದ್ವೀಪ ಸಮೂಹವನ್ನು ಉಳಿಸಿ ಎಂಬ ಅಭಿಯಾನಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಸಹ ಕೈ ಜೋಡಿಸಿದ್ದಾರೆ. ಭಾರತದ ದಕ್ಷಿಣದಲ್ಲಿರುವ ಕೇರಳದ ಕರಾವಳಿಯಿಂದ 300 ಕಿಲೋಮೀಟರ್ ದೂರದಲ್ಲಿರುವ ಅರೇಬಿಯನ್ ಸಮುದ್ರದಲ್ಲಿದೆ, ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ವಿಶ್ವದ ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ.
ಈ ದ್ವೀಪಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳು ಸಹ ಲಭ್ಯವಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವು ಲಕ್ಷದ್ವೀಪದ ಭವಿಷ್ಯಕ್ಕೆ ವ್ಯವಸ್ಥಿತ ಮತ್ತು ಯೋಜಿತ ರೀತಿಯಲ್ಲಿ ಅಡಿಪಾಯ ಹಾಕಲಾಗಿದೆ. ಆದರೆ ಸದ್ಯ ಲಕ್ಷದ್ವೀಪದ ಮಹತ್ವಾಕಾಂಕ್ಷೆಯ ಅಭಿವೃದ್ಧಿ ಯೋಜನೆಯ ವ್ಯವಹಾರಗಳ ಚುಕ್ಕಾಣಿ ಹಿಡಿದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಆದೇಶಿಸಿದ ಕೆಲವು ನಿಯಮಗಳನ್ನು ವಿರೋಧಿಸಿ ಈ ಅಭಿಯಾನವನ್ನು ಆರಂಭಿಸಲಾಗಿದೆ.
ಪ್ರಫುಲ್ ಪಟೇಲ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇಮಕ ಮಾಡಿದ್ದಾರೆ. ಪಟೇಲ್ ಗುಜರಾತ್‌ನ ಮಾಜಿ ಗೃಹ ಸಚಿವರಾಗಿದ್ದಾರೆ. ಸಾಮಾನ್ಯವಾಗಿ ಆಡಳಿತಾಧಿಕಾರಿಯಾಗಿ ಹಾಲಿ ಅಥವಾ ಮಾಜಿ ಅಧಿಕಾರಿಗಳನ್ನು ನೇಮಕ ಮಾಡುವುದು ವಾಡಿಕೆ. ಆದರೆ ಮೊದಲ ಬಾರಿ ಸಂಪ್ರದಾಯ ಮುರಿದು ರಾಜಕಾರಣಿಯನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಲಕ್ಷದ್ವೀಪದಲ್ಲಿನ ಶಾಂತಿ ಮತ್ತು ಸಂಸ್ಕೃತಿಯನ್ನು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ನಾಮ ಮಾಡುತ್ತಿದ್ದಾರೆ. ಸಮಾಜಘಾತುಕ ಚಟುವಟಿಕೆ ತಡೆ ಕಾಯಿದೆಯಂತಹ ಕಾಯಿದೆಗಳ ಮೂಲಕ ಜನರನ್ನು ವಿನಾಕಾರಣ ಹಿಂಸಿಸುತ್ತಿದ್ದಾರೆ. ಪಂಚಾಯಿತಿ ಅಧಿಕಾರವನ್ನು ಹಿಂಪಡೆದಿದ್ದಾರೆ. ಮೀನುಗಾರರ ಮನೆಗಳನ್ನು ಧ್ವಂಸ ಮಾಡುತ್ತಿದ್ದಾರೆ. ಹೀಗಾಗಿ ರಾಷ್ಟ್ರಪತಿಯವರು ಆಡಳಿತಾಧಿಕಾರಿಯನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿದೆ.
ಇನ್ನು ಲಕ್ಷದ್ವೀಪದಲ್ಲಿ ೮೫% ಕ್ಕಿಂತಲೂ ಅಧಿಕ ಇಸ್ಲಾಂ ಧರ್ಮೀಯರು ವಾಸವಾಗಿದ್ದಾರೆ. ಹೀಗಿರುವಾಗ ನೂತನವಾಗಿ ಜಾರಿಮಾಡಲಾದ ಗೋಮಾಂಸ ನಿಷೇಧ ನಿಯಮ ಅಲ್ಲಿನವರ ಕೆಂಗಣ್ಣಿಗೆ ಗುರಿಯಾಗಿದೆ. ಇದಲ್ಲದೇ, ಲಕ್ಷದ್ವೀಪ ಸುಧಾರಣೆಗಾಗಿ ಮೂಲನಿವಾಸಿಗಳ ಭೂಮಿಯನ್ನು ಸ್ವಾಧೀನಪಡಿಸಲಾಗುತ್ತಿದೆ. ಹೀಗಾಗಿ ಪಟೇಲ್ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಸೇವ್ ಲಕ್ಷದ್ವೀಪ ಅಭಿಯಾನ ಆರಂಭವಾಗಿದೆ.
ಹೀಗಾಗಿ ಲಕ್ಷದ್ವೀಪದಲ್ಲಿ ಭಾರಿ ವಿರೋಧಕ್ಕೆ ಗುರಿಯಾಗಿರುವ ವಿವಾದಿತ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ವಜಾಕ್ಕೆ ಹೆಚ್ಚಿನ ಒತ್ತಡ ಕೇಳಿಬರುತ್ತಿದೆ. ಆಡಳಿತಾಧಿಕಾರಿಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಕಾಂಗ್ರೆಸ್ ಪತ್ರ ಬರೆದಿದೆ.