ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (MGNREGA) ಸ್ವರೂಪ ಬದಲಾವಣೆ ಹಾಗೂ ಹೆಸರು ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ರಾಜ್ಯ ಕಾಂಗ್ರೆಸ್ ಘಟಕ, ಇದರ ವಿರುದ್ಧ ಹಳ್ಳಿ ಹಳ್ಳಿಯಿಂದಲೇ ಹೋರಾಟ ರೂಪಿಸಲು ಸಜ್ಜಾಗಿದೆ. ನರೇಗಾ ಬಚಾವ್ ಘೋಷವಾಕ್ಯದಡಿ ಜನವರಿ 5ರಿಂದ ರಾಜ್ಯವ್ಯಾಪಿ ಬೃಹತ್ ಆಂದೋಲನವನ್ನು ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯ ವೇಳೆ ಮಾತನಾಡಿದ ರಾಜ್ಯ ನಾಯಕರು, ಕೇಂದ್ರದ ಬಿಜೆಪಿ ಸರ್ಕಾರವು ಗ್ರಾಮೀಣ ಆರ್ಥಿಕತೆಯನ್ನೇ ಬುಡಮೇಲು ಮಾಡಲು ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿಯ ರಾಮ ಬೇರೆ, ದಶರಥ ರಾಮನೇ ಬೇರೆ: ಸಿಎಂ ವಾಗ್ದಾಳಿ
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸಿಹಾಕುವ ದುರುದ್ದೇಶದಿಂದ ನರೇಗಾ ಯೋಜನೆಗೆ ವಿ ಬಿ ಜಿ ರಾಮ್ ಜಿ ಎಂದು ಮರುನಾಮಕರಣ ಮಾಡಲು ಹೊರಟಿದೆ. ಈ ಬಗ್ಗೆ ಸಂಸತ್ತಿನಲ್ಲಿ ಯಾವುದೇ ಚರ್ಚೆಯನ್ನೂ ನಡೆಸಿಲ್ಲ. ಇವರು ಹೇಳುತ್ತಿರುವ ರಾಮ ದಶರಥನ ಮಗ ರಾಮನಲ್ಲ, ಇದು ಬಿಜೆಪಿಯ ರಾಮ ಎಂದು ವ್ಯಂಗ್ಯವಾಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರನ್ನು ಶಾಶ್ವತವಾಗಿ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹೆಸರು ಬದಲಾವಣೆ ನಿರ್ಧಾರವು ಕೇಂದ್ರ ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ, ಸಂಬಂಧಪಟ್ಟ ಸಚಿವರಿಗೂ ಇದರ ಅರಿವಿಲ್ಲ. ಇದೆಲ್ಲವೂ ಪ್ರಧಾನಿ ಕಚೇರಿಯಿಂದಲೇ ನೇರವಾಗಿ ಬಂದಿರುವ ಆದೇಶವಾಗಿದೆ. ಅಧಿಕಾರ ಹಿಡಿಯಲು ಮತಗಳ್ಳತನ ಸೇರಿದಂತೆ ಯಾವುದೇ ಕೀಳುಮಟ್ಟಕ್ಕೆ ಇಳಿಯುವ ಬಿಜೆಪಿ, ಈಗ ಬಡವರ ಅನ್ನ ಕಸಿದುಕೊಳ್ಳುವ ಹುನ್ನಾರ ನಡೆಸಿದೆ. ಹೊಸ ಕಾಯ್ದೆಯ ಮೂಲಕ ರಾಜ್ಯಗಳ ಮೇಲೆ ಆರ್ಥಿಕ ಹೊರೆಯನ್ನು ಹೇರುತ್ತಿದೆ. ಇದನ್ನು ನಾವೆಲ್ಲರೂ ಒಗ್ಗೂಡಿ ವಿಫಲಗೊಳಿಸಬೇಕಿದೆ ಎಂದು ಸಿಎಂ ಕರೆ ನೀಡಿದರು.
ಯೋಜನೆಯ ಹತ್ಯೆಗೆ ಮುಂದಾದ ಕೇಂದ್ರ: ಡಿಕೆಶಿ ಆಕ್ರೋಶ
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ಚುಕ್ಕಾಣಿ ಹಿಡಿದು 101 ವರ್ಷಗಳಾಗುತ್ತಿವೆ. ಇಂತಹ ಐತಿಹಾಸಿಕ ಸಂದರ್ಭದಲ್ಲಿ ಅವರ ಹೆಸರಿನ ಯೋಜನೆಯನ್ನು ಕೇಂದ್ರ ಸರ್ಕಾರ ಹತ್ಯೆ ಮಾಡಲು ಮುಂದಾಗಿದೆ. ಯೋಜನೆಯಡಿ ಅನುದಾನ ಹಂಚಿಕೆಯಲ್ಲಿ 60:40 ಅನುಪಾತದ ಬದಲಾವಣೆ ತಂದಿರುವುದು ರಾಜ್ಯಗಳಿಗೆ ಮರಣಶಾಸನವಾಗಲಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಇದನ್ನು ಜಾರಿ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ ಎಂದು ಕಿಡಿಕಾರಿದರು.
ಪಂಚಾಯ್ತಿ ಮಟ್ಟದಲ್ಲಿ ಕಾವಲು ಪಡೆ ರಚನೆ
ಹೋರಾಟದ ರೂಪುರೇಷೆಗಳನ್ನು ವಿವರಿಸಿದ ಡಿಕೆಶಿ, ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗದೆ ಪಂಚಾಯ್ತಿ ಮಟ್ಟದಿಂದಲೇ ಸಂಘಟಿತ ಹೋರಾಟ ರೂಪಿಸಲಾಗುವುದು. ಇದಕ್ಕಾಗಿ ಗ್ಯಾರಂಟಿ ಸಮಿತಿ, ಬೆಸ್ಕಾಂ ಹಾಗೂ ಆರೋಗ್ಯ ಸಮಿತಿಗಳ ಸದಸ್ಯರನ್ನು ಒಳಗೊಂಡ 150-200 ಜನರ ಪಡೆಯನ್ನು ಬಳಸಿಕೊಳ್ಳಲಾಗುವುದು. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ವೀಕ್ಷಕರನ್ನು ನೇಮಿಸಿ, ಹೋರಾಟದ ಉಸ್ತುವಾರಿ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹತ್ವದ ರಾಜಕೀಯ ಘೋಷಣೆ ಮಾಡಿದ ಡಿ.ಕೆ. ಶಿವಕುಮಾರ್, ಇನ್ನು ಕೇವಲ ಎರಡು ಮೂರು ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ತಿಳಿಸಿದರು. ಮೀಸಲಾತಿ ಕುರಿತಾದ ಕಾನೂನು ತೊಡಕುಗಳನ್ನು ಬಗೆಹರಿಸಲು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸೂಚನೆ ನೀಡಲಾಗಿದ್ದು, ಕಾರ್ಯಕರ್ತರು ಇಂದಿನಿಂದಲೇ ಚುನಾವಣೆಗೆ ಸಜ್ಜಾಗಬೇಕು ಎಂದು ನಿರ್ದೇಶನ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಹಿರಿಯ ಮುಖಂಡರು ಉಪಸ್ಥಿತರಿದ್ದು, ಕೇಂದ್ರದ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು.








