ರಾಯಚೂರು : ಬೆಂಗಳೂರು ಗಲಭೆ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಈ ಗಲಭೆಯಲ್ಲಿ ಭಾಗಿಯಾಗಿದ್ದವರು ಮುಗ್ಧ ಹಾಗೂ ಅಮಾಯಕರು ಎಂಬ ಜಮೀರ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಒಳ್ಳೆಯವರು ಮಧ್ಯರಾತ್ರಿ ಬಂದು ದೊಂಬಿ ಮಾಡುವುದಿಲ್ಲ. ನವೀನ್ ಎಂಬಾತ ಡಿಕೆಶಿ ನಮ್ಮ ಬಾಸ್, ರಾಹುಲ್, ಪ್ರಿಯಾಂಕ ನಮ್ಮ ನಾಯಕರು ಎಂದು ಪೋಸ್ಟ್ ಹಾಕುತ್ತಿದ್ದ. ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ನವೀನ್ ಬಿಜೆಪಿಯವನು ಎಂದು ಬಿಂಬಿಸುತ್ತಿದೆ. ಚುನಾವಣೆ ವೇಳೆ ನವೀನ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾನೆ. ಈ ಎಲ್ಲಾ ಮಾಹಿತಿ ನಮ್ಮ ಗೃಹ ಇಲಾಖೆ ಬಳಿ ಇವೆ. ಸಮಾಜಕ್ಕೆ ತಪ್ಪು ಸಂದೇಶ ಕಾಂಗ್ರೆಸ್ ಪಕ್ಷ ನೀಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮಂಗಳವಾರ ರಾತ್ರಿ ನಡೆದ ಗಲಭೆ ವೇಳೆ ಪೊಲೀಸರ ಫೈರಿಂಗ್ ವೇಳೆ ಮೂವರು ಮೃತಪಟ್ಟಿದ್ದರು. ಇವರ ಮನೆಗಳಿಗೆ ಭೇಟಿ ನೀಡಿದ್ದ ಜಮೀರ್, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು. ಬಳಿಕ ಯಾರೋ ಮಾಡಿದ ತಪ್ಪಿಗೆ ಮುಗ್ಧ ಅಮಾಯಕರು ಬಲಿಯಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದರು.