ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಕಾಲಿಟ್ಟಿದೆ. ಇದರ ಜೊತೆಗೆ ಈ ವೈರಸ್ ಬಗ್ಗೆ ಬರುತ್ತಿರುವ ವದಂತಿಗಳು ಜನರನ್ನು ಕಂಗೆಡಿಸುತ್ತಿವೆ. ಈ ಹಿನ್ನೆಲೆ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. ಜನೌಷಧಿ ಸಂವಾದದಲ್ಲಿ ಮಾತನಾಡಿರುವ ಅವರು, ಜನರು ಅದು ತಿನ್ನಬೇಡಿ, ಇದು ತಿನ್ನ ಎಂದು ಹೇಳುತ್ತಾರೆ, ಇವಕ್ಕೆಲ್ಲಾ ಕಿವಿಗೊಡಬೇಡಿ. ಕೊರೋನಾ ವೈರಸ್ ಬಗ್ಗೆ ಆತಂಕ ಪಡಬೇಕಾಗಿಲ್ಲ. ಮುಂಜಾಗ್ರತೆ ಕ್ರಮ ವಹಿಸಿ ಎಂದು ಹೇಳಿದ್ದಾರೆ. ಒಂದು ವೇಳೆ ವೈರಸ್ ಬಗ್ಗೆ ನಿಮಗೆ ಏನಾದರೂ ಸಂಶಯಗಳು ಬಂದಿದ್ದೇ ಆದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ. ವೈದ್ಯರ ಸಲಹೆ ಬಳಿಕ ನಿಮ್ಮ ಮುಂದಿನ ನಿಲುವನ್ನು ತೆಗೆದುಕೊಳ್ಳಿ. ಕೊರೋನಾ ವೈರಸ್ ಹರಡದಂತೆ ಸ್ವಚ್ಛತೆ ಕಾಪಾಡಿ ಎಂದು ತಿಳಿಸಿದ್ದಾರೆ.
“ಶೇಕ್ ಹ್ಯಾಂಡ್ ಬದಲು ನಮಸ್ತೆ ಹೇಳಿ”
ದೈನಂದಿನ ಕಾರ್ಯಚಟುವಟಿಕೆಯಲ್ಲಿ ಶುಭಾಶಯ ಹೇಳುವಾಗ ಶೇಕ್ ಹ್ಯಾಂಡ್ ಬದಲು ನಮಸ್ತೆಯನ್ನು ಬಳಸಿ. ಇದು ಭಯಾನಕ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಸಹಾಯಕವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.








