ಜನವರಿ 29ರವರೆಗೂ ಶಾಲಾ-ಕಾಲೇಜು ಬಂದ್
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲಾ – ಕಾಲೇಜುಗಳಲ್ಲಿ ಪ್ರತಿ ದಿನ ಕೊರೊನಾ ಸ್ಫೋಟವಾಗುತ್ತಿದೆ. ಆದರೂ ಯಾವುದೇ ಕಾರಣಕ್ಕೂ ಶಾಲೆಗಳನ್ನು ಬಂದ್ ಮಾಡಬಾರದು ಎಂದು ವಾದ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಇಂದಿನ ಸಿಎಂ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇಂದಿನ ಸಭೆಗೂ ಮುನ್ನ ಶಿಕ್ಷಣ ಸಚಿವರು, ಶಾಲೆ ಬಂದ್ ಮಾಡುವುದು ಬೇಡ ಎಂದು ಅಭಿಪ್ರಾಯ ತಿಳಿಸಿದ್ದರು. ಇದೀಗ ಸಿಎಂ ನೇತೃತ್ವದ ಸಭೆ ಮುಕ್ತಾಯಗೊಂಡಿದ್ದು, ಬೆಂಗಳೂರಿನಲ್ಲಿ ಮಾತ್ರ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಿಣ ಸಚಿವ ಬಿ.ಸಿ.ನಾಗೇಶ್, ಕೊರೊನಾ ಸೋಂಕು ಹೆಚ್ಚಿರುವ ಬೆಂಗಳೂರಿನಲ್ಲಿ ಮಾತ್ರ ಶಾಲಾ ಕಾಲೇಜು ಬಂದ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲಾ ಕಡೆ ಶಾಲೆ ಇರುತ್ತೆ ಎಂದು ತಿಳಿಸಿದರು.
ಇನ್ನು ಶಾಲಾ ಕಾಲೇಜು ಬಂದ್ ಮಾಡುವುದರ ಬಗ್ಗೆ ಜನವರಿ 29ಕ್ಕೆ ಮತ್ತೆ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲಿಯ ವರೆಗೂ ಬೆಂಗಳೂರಿನಲ್ಲಿ ಸದ್ಯ ನಿಯಮಗಳೇ ಮುಂದುವರೆಯಲಿವೆ. ಬೆಂಗಳೂರು ಹೊರತುಪಡಿಸಿ ರಾಜ್ಯ ಬೇರೆ ಜಿ್ಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.









