ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಶಾಲಾ ಕಾಲೇಜುಗಳು ಪುನರಾರಂಭ
ಬೆಂಗಳೂರು, ಸೆಪ್ಟೆಂಬರ್17: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾಲಾ ಕಾಲೇಜುಗಳು ಸೆಪ್ಟೆಂಬರ್ 21ರಿಂದ ಪುನರಾರಂಭಗೊಳ್ಳಲು ತಯಾರಾಗಿದೆ. ರಾಜ್ಯ ಸರ್ಕಾರ ಅನೇಕ ಷರತ್ತುಗಳೊಂದಿಗೆ ಸೆಪ್ಟೆಂಬರ್ 21ರಿಂದ 9 – 12ನೇ ತರಗತಿಗಳ ಪುನರಾರಂಭಕ್ಕೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳು ಹೆತ್ತವರ/ಪೋಷಕರ ಸಭೆಯನ್ನು ಕರೆದು ರಾಜ್ಯ ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ಇತ್ಯಾದಿ ಮುನ್ನೆಚ್ಚರಿಕೆಯೊಂದಿಗೆ ಹಲವು ಕಟ್ಟುನಿಟ್ಟಿನ ನಿಯಮಗಳೊಂದಿಗೆ 9 ರಿಂದ 12 ತರಗತಿಗಳು ಸೋಮವಾರದಿಂದ ಪ್ರಾರಂಭವಾಗಲಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್ ನಿಂದ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದೀಗ 6 ತಿಂಗಳ ಬಳಿಕ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಜ್ಜಾಗಿದೆ.
ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಶಾಲಾ-ಕಾಲೇಜು ಪ್ರಾರಂಭಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಆರೋಗ್ಯ ಇಲಾಖೆ ಶಾಲಾ-ಕಾಲೇಜುಗಳ ಪ್ರಾರಂಭಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಕೊರೋನಾ ಪ್ರಕರಣಗಳ ನಡುವೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಸರ್ಕಾರ ಇದೀಗ ಶಾಲಾ ಕಾಲೇಜುಗಳ ಪುನರಾರಂಭಕ್ಕೆ ಅನುಮತಿ ನೀಡಿದ್ದು ಮತ್ತೊಂದು ಪ್ರಯೋಗಕ್ಕೆ ಸಿದ್ಧವಾಗಿದೆ.
ಶಾಲಾ ಮಾರ್ಗಸೂಚಿಗಳು
ವಿದ್ಯಾರ್ಥಿಗಳನ್ನು ಶಾಲೆಗೆ ಕಡ್ಡಾಯವಾಗಿ ಬರುವಂತೆ ಒತ್ತಾಯ ಮಾಡುವಂತಿಲ್ಲ.
ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಯ ಹೆತ್ತವರು/ಪೋಷಕರು ಒಪ್ಪಿಗೆ ಪತ್ರ ನೀಡಿರಬೇಕು.
ಶಾಲಾ ಕಾಲೇಜುಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳು ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಮಾಡಿರಬೇಕು
ಪ್ರತಿ ದಿನ ವಿದ್ಯಾರ್ಥಿಗಳು ತರಗತಿ ಪ್ರವೇಶಕ್ಕೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ
ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸ್ ಬಳಕೆ ಕಡ್ಡಾಯ
ಶಾಲಾ ಕೊಠಡಿಗಳು ಪ್ರತಿ ನಿತ್ಯ ಸ್ಯಾನಿಟೈಸ್ ಮಾಡಬೇಕು
ಶಾಲಾ-ಆವರಣದಲ್ಲಿ ವಿದ್ಯಾರ್ಥಿಗಳು ಗುಂಪು ಸೇರುವಂತಿಲ್ಲ
ಗುಂಪು ಕ್ರೀಡೆಗೆ ಅವಕಾಶವಿಲ್ಲ
ಶೌಚಾಲಯ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ