ತಜ್ಞರು ಅನುಮತಿ ನೀಡಿದರೆ ಮರುದಿನವೇ ಶಾಲೆ ಪ್ರಾರಂಭ: ಬಿ.ಸಿ ನಾಗೇಶ್ Saaksha Tv
ಬೆಂಗಳೂರು : ನಗರದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನಲೆ 1 ರಿಂದ 9ನೇ ತರಗತಿಗಳ ಶಾಲೆಗಳಿಗೆ ರಜೆ ನೀಡಲಾಗಿತ್ತು. ಈಗ ಅವುಗಳನ್ನು ಪ್ರಾರಂಭ ಮಾಡಲು ತಜ್ಞರು ಅನುಮತಿ ನೀಡಿದರೆ, ಮರುದಿನವೇ ಶಾಲೆ ಪ್ರಾರಂಭ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಶುಕ್ರವಾರ ಸಿಎಂ ತಜ್ಞರ ಸಭೆ ಕರೆದಿದ್ದಾರೆ. ಸಭೆಯಲ್ಲಿ ತಜ್ಞರು ಅನುಮತಿ ನೀಡಿದರೆ, ಬೆಂಗಳೂರಿನಲ್ಲಿ 1-9 ಅಥವಾ 5-9 ನೇ ತರಗತಿ ಪ್ರಾರಂಭ ಮಾಡುತ್ತೇವೆ. ಕೊರೊನಾ ಸೋಂಕು ಹರಡುವಿಕೆ ಜಾಸ್ತಿ ಆಗದೇ ಹೋದರೆ ನಿಗದಿಯಂತೆ ಎಸ್‍ಎಸ್‍ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ ಪರೀಕ್ಷೆಯ ಎಲ್ಲಾ ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು.
ಅಲ್ಲದೇ ಶಾಲೆಗಳು ಮಕ್ಕಳಿಗೆ ಸುರಕ್ಷಿತ ಸ್ಥಳಗಳು. ಶಾಲೆಗಳಿಗೆ ಮಕ್ಕಳು ಬಂದಾಗ ರೋಗ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಬಹುದು ಮತ್ತು ಚಿಕಿತ್ಸೆ ಕೊಡಿಸಬಹುದು. ಜಿಲ್ಲೆಗಳಲ್ಲೂ ಡಿಸಿಗಳೇ ಶಾಲೆ ಪ್ರಾರಂಭದ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.