ದಕ್ಷಿಣ ಕನ್ನಡ ಹಾಗೂ ಕೊಡುಗು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ತೀವ್ರಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆ, ಜಿಲ್ಲಾಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಹವಾಮಾನ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಗೆ ಮೇ 27 ಮತ್ತು 28ರಂದು ರೆಡ್ ಅಲರ್ಟ್ ಪ್ರಕಟಿಸಿದ್ದು, ಈ ಎರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಧಿಕೃತವಾಗಿ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಈ ಆದೇಶದಡಿ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು, ಪದವಿಪೂರ್ವ ಕಾಲೇಜುಗಳು, ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲರಿಗೂ ಮೇ 27 ಹಾಗೂ 28ರಂದು ರಜೆ ಘೋಷಿಸಲಾಗಿದೆ
ಅದೇ ರೀತಿಯಾಗಿ, ಕೊಡಗು ಜಿಲ್ಲೆಯಲ್ಲಿಯೂ ಮೇ 27ರಂದು ಭಾರೀ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳಿಂದ ರಜೆ ಘೋಷಿಸಲಾಗಿದೆ. ಇಲ್ಲಿಯೂ ಅಂಗನವಾಡಿ ಕೇಂದ್ರಗಳಿಗೆ ಸಹ ರಜೆ ನೀಡಲಾಗಿದೆ.








