ರಾಜ್ಯದಲ್ಲಿ ಪ್ರಾಥಮಿಕ ಶಾಲಾ ತರಗತಿಗಳ ಪುನರಾರಂಭದ ಬಗ್ಗೆ ಚಿಂತನೆ..!
ರಾಜ್ಯದಲ್ಲಿ ಕೊರೊನಾ ಹಾವಳಿ ತಗ್ಗುತ್ತಿರುವ ಬೆನ್ನಲ್ಲೇ ಸರ್ಕಾರವು ಮಧ್ಯಮ ಮತ್ತು ಪ್ರಾಥಮಿಕ ಶಾಲಾ ತರಗತಿಗಳ ಪುನರಾರಂಭದ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಕೊರೊನಾ ವೈರಸ್ ಕುರಿತು ತಾಂತ್ರಿಕ ತಜ್ಞರ ಸಮಿತಿಯೊಂದಿಗೆ ಸಮಾಲೋಚಿಸಿದ ನಂತರ, 1 ರಿಂದ 5 ನೇ ತರಗತಿಯವರೆಗೆ ಶಾಲೆಗಳನ್ನು ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಾವು ಶೀಘ್ರದಲ್ಲೇ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸುತ್ತಿದ್ದೇವೆ. ಈ ವಿಷಯದ ಬಗ್ಗೆ ಚರ್ಚಿಸಲಾಗುವುದು ಮತ್ತು ಅವರ ಸಲಹೆ ಪಡೆದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಆಗಸ್ಟ್ 23 ರಂದು 9 ರಿಂದ 12 ನೇ ತರಗತಿಗಳಿಗೆ ಶಾಲೆಗಳನ್ನ ಪುನರಾರಂಭಿಸುವ ಆದೇಶ ಹೊರಡಿಸಿತ್ತು.
ನಂತರ ಸೆಪ್ಟೆಂಬರ್ 6 ರಿಂದ ಪರ್ಯಾಯ ದಿನಗಳಲ್ಲಿ 6-8 ನೇ ತರಗತಿಯ ವಿದ್ಯಾರ್ಥಿಗಳಿಗೆ , ಪಾಸಿಟಿವಿಟಿ ರೇಟ್ ಕಡಿಮೆ ಇರುವ ಸ್ಥಳಗಳಲ್ಲಿ ಶಾಲೆಗಳಿಗೆ ಹಾಜರಾಗಲು ಅವಕಾಶ ನೀಡಿತ್ತು.
ರಾಜ್ಯದಲ್ಲಿ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘವು (RUPSA) ಪ್ರಾಥಮಿಕ ಶಾಲೆಗಳನ್ನು ಮತ್ತೆ ತೆರೆಯುವಂತೆ ಕೆಲ ದಿನಗಳಿಂದ ಸರ್ಕಾರದ ಮೇಲೆ ಒತ್ತಡ ಹೇರಿತ್ತು.
ಪ್ರಾಥಮಿಕ ಶಾಲೆಗಳನ್ನು ಮತ್ತೆ ತೆರೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ RUPSA ಅಧ್ಯಕ್ಷ ಹಾಲನೂರು ಎಸ್ ಲೇಪಾಕ್ಷ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.