ಕರ್ನಾಟಕದಲ್ಲಿ ಸೆಪ್ಟೆಂಬರ್ನಿಂದ ಶಾಲೆಗಳನ್ನು ಪುನರಾರಂಭಿಸುವುದಿಲ್ಲ – ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಮಂಡ್ಯ, ಅಗಸ್ಟ್ 13: ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆ ಕೆಲವು ರಾಜ್ಯಗಳು ಸೆಪ್ಟೆಂಬರ್ನಲ್ಲಿ ಶಾಲೆಯನ್ನು ಪುನರಾರಂಭಿಸಲು ಚಿಂತನೆ ನಡೆಸುತ್ತಿದ್ದು, ಕೇಂದ್ರ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದೆ ಎಂಬ ವದಂತಿಗಳು ಹರಡಿವೆ. ಇದಕ್ಕೆ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಒಂದು ವೇಳೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದರೂ ಪ್ರಸ್ತುತ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಸೆಪ್ಟೆಂಬರ್ನಿಂದ ಶಾಲೆಗಳನ್ನು ಪುನರಾರಂಭಿಸುವುದಿಲ್ಲ ಎಂದಿರುವ ಸಚಿವರು ನಮ್ಮ ಮುಂದೆ ದೊಡ್ಡ ಸವಾಲುಗಳಿವೆ. ಕ್ಷಣ ಕ್ಷಣಕ್ಕೂ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಮುಂದಿನ ದಿನಗಳು ಹೇಗೆ ಇರಬಹುದು ಎಂದು ಕೂಡ ನಾವು ಅಲೋಚಿಸಬೇಕಾಗಿದೆ ಎಂದು ಹೇಳಿದರು.

ಮಂಡ್ಯಕ್ಕೆ ಭೇಟಿ ನೀಡಿದ್ದ ಸಚಿವ ಸುರೇಶ್ ಕುಮಾರ್ ಶಾಲೆ ಆರಂಭದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಈ ನಡುವೆ ಶಾಲೆ ಪುನರಾರಂಭಿಸಲು ಸುರೇಶ್ ಕುಮಾರ್ ಗೆ ಅವಸರವಿದೆ ಎಂದು ವದಂತಿಗಳು ಹರಿದಾಡುತ್ತಿದೆ. ಖಂಡಿತವಾಗಿಯೂ ನನಗೆ ಅವಸರವಿಲ್ಲ. ಮಕ್ಕಳ ಆರೋಗ್ಯ ನನಗೆ ಬಹಳ ಮುಖ್ಯವಾಗಿದ್ದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಸೆಪ್ಟೆಂಬರ್ನಿಂದ ಶಾಲೆಗಳನ್ನು ಪುನರಾರಂಭಿಸುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಈಗಾಗಲೇ ವಿದ್ಯಾಗಮನ ಕಾರ್ಯಕ್ರಮದ ಮೂಲಕ ಕಲಿಕೆ ಮುಂದುವರೆದಿದ್ದು, ಈ ಕಾರ್ಯಕ್ರಮವು ಇಡೀ ರಾಷ್ಟ್ರವೇ ನೋಡುವಂಥ ಅತ್ಯುತ್ತಮ ಯೋಜನೆಯಾಗಿದೆ ಎಂದು ಹೇಳಿದರು.
ಜೊತೆಗೆ ಟಿವಿಯಲ್ಲಿ ಸೇತುಬಂಧ ಕಾರ್ಯಕ್ರಮವು ಪ್ರಸಾರವಾಗುತ್ತಿದ್ದು, ಶಿಕ್ಷಣ ಇಲಾಖೆಯಿಂದ ಎರಡು ಚಾನಲ್ಗಳನ್ನು ಪ್ರಾರಂಭಿಸುತ್ತಿದ್ದೇವೆ. ಎಲ್ಲಾ ತರಗತಿಗಳಿಗೆ ಪಾಠ ಮಾಡಲು ಸಿದ್ದತೆ ನಡೆದಿದ್ದು, ಪಠ್ಯಕ್ರಮ ಕೂಡ ಸಿದ್ಧವಾಗಿದೆ. ಶಿಕ್ಷಣ ಇಲಾಖೆ ಸಮಾಜಕ್ಕೆ ಭರವಸೆ ಕೊಡುವ ಕಾರ್ಯವನ್ನು ಮಾಡುತ್ತಿದೆ ಎಂದು ಸಚಿವರು ಹೇಳಿದರು.








