ಚಾಮರಾಜನಗರ : ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ಎಸ್ ಡಿಪಿಐ ಸಂಘಟನೆ ಪಾತ್ರ ಇರುವುದು ಬೆಳಕಿಗೆ ಬಂದಿರುವುದರಿಂದ ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಚಿವ ಸುರೇಶ್ ಕುಮಾರ್ ಅವರು ಇಂದು ನಗರದ ವಿದ್ಯಾನಗರ ಬಡಾವಣೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಾಲಯ ನಿರ್ಮಾಣ ಕ್ಕೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿಯಲ್ಲಿ ನಡೆದಿರುವುದು ದುರಂತ. ಇಂತಹ ದುರಂತಗಳು ಮತ್ತೆ ಮತ್ತೆ ನಡೆಯಬಾರದು ಎಂಬೋದು ಜನರ ಒತ್ತಾಯ. ಯಾರು ದುರಂತಕ್ಕೆ ಮೂಲಪುರುಷರೋ, ಅವರನ್ನು ಹುಡುಕಬೇಕು. ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ಎಸ್ ಡಿಪಿಐ ಪಾತ್ರ ಇದೆ ಎಂಬ ಎಂಬುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎಸ್ ಡಿಪಿಐಯನ್ನು ನಿಷೇಧಿಸಬೇಕು ಎಂಬ ಕೂಗೆದ್ದಿದೆ. ಇದು ಸರ್ವ ಸಮ್ಮತಿಯ ಬೇಡಿಕೆ ಎಂದರು.
ಜನರಿಗೆ ಶಾಂತಿ ಸೌಹಾರ್ದತೆ ಬೇಕು. ಸಮಾಜ ದ್ರೋಹಿ ಸಂಘಟನೆಗಳು ಸಮಾಜದಲ್ಲಿ ಶಾಂತಿ ಇರಬಾರದು ಎಂಬ ಧ್ಯೇಯ ಹೊಂದಿವೆ. ಹಾಗಾಗಿ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬುದು ನನ್ನ ಬಲವಾದ ಅಭಿಪ್ರಾಯ ಪಟ್ಟಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.








