ಮಂಗಳೂರು, ಮೇ 18 : ದುಬೈನಿಂದ ಇಂದು ಸಂಜೆ 6.30ಕ್ಕೆ ಎರಡನೇ ವಿಮಾನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ. ಕೇಂದ್ರ ಸರ್ಕಾರದ ವಂದೇ ಭಾರತ ಕಾರ್ಯಚರಣೆಯಂತೆ ಲಾಕ್ ಡೌನ್ ಹಿನ್ನೆಲೆಯಲ್ಲಿ ದುಬೈ ನಲ್ಲಿ ಸಿಲುಕಿಕೊಂಡಿರುವ 35 ಗರ್ಭಿಣಿಯರ ಸಹಿತ 173 ಮಂದಿಯನ್ನು ಹೊತ್ತು ಎರಡನೇ ವಿಮಾನ ಇಂದು ಆಗಮಿಸಲಿದೆ. ಮೇ 12 ರಂದು ಮೊದಲ ವಿಮಾನ 177 ಮಂದಿ ಕರಾವಳಿಗರನ್ನು ದುಬೈನಿಂದ ಮಂಗಳೂರಿಗೆ ಕರೆತಂದಿತ್ತು.
ಇಂದು ಬೆಳಗ್ಗೆ ಮಂಗಳೂರಿನಿಂದ ದುಬೈ ಗೆ ತೆರಳಿರುವ ಏರ್ ಇಂಡಿಯಾ ವಿಮಾನ, ಮಧ್ಯಾಹ್ನ 3 ರ ಸುಮಾರಿಗೆ 95 ಪುರುಷರು ಮತ್ತು 78 ಮಹಿಳಾ ಪ್ರಯಾಣಿಕರೊಂದಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 6.30ಕ್ಕೆ ಬಂದಿಳಿಯಲಿದೆ.ಇಂದು ಆಗಮಿಸಲಿರುವ ಪ್ರಯಾಣಿಕರಿಗೆ ಯಾವ ಸಮಸ್ಯೆ ಆಗದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದು, ದ.ಕ.ಜಿಲ್ಲೆಯವರಿಗೆ ಮಂಗಳೂರಿನಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಿದ್ದರೆ, ಉಡುಪಿ ಮತ್ತು ಇತರ ಜಿಲ್ಲೆಯ ಪ್ರಯಾಣಿಕರಿಗೆ ಆಯಾಯ ಜಿಲ್ಲೆಗಳಲ್ಲಿ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗಿದೆ.
ಹೊಟೇಲ್ ನಲ್ಲಿ ಕ್ವಾರಂಟೈನ್ ಆಗಲು ಹಣ ಪಾವತಿಸುವ ಷರತ್ತುಗೊಳಪಟ್ಟ ಒಪ್ಪಿಗೆ ಪತ್ರ ನೀಡಿರುವವರಿಗೆ ನಗರದಲ್ಲಿ ಜಿಲ್ಲಾಡಳಿತ 10 ಹೋಟೆಲ್ ಗಳನ್ನು ಕಾದಿರಿಸಿದ್ದು, ಅವುಗಳಿಗೆ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಹೊಟೇಲ್ ನಲ್ಲಿ
ವಾಸ್ತವ್ಯಕ್ಕೆ ಒಪ್ಪಿಗೆ ನೀಡದವರಿಗೆ ಸರಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ನಲ್ಲಿಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ವಿಮಾನದಿಂದ ಇಳಿದ ತಕ್ಷಣ ಎಲ್ಲಾ ಪ್ರಯಾಣಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ನಂತರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಬಳಿಕ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ಕಲ್ಪಿಸಿದೆ.








