ಬೆಂಗಳೂರು, ಮೇ 16 : ಕೊರೋನಾ ಸೋಂಕಿನ ಭೀತಿಯಿಂದ ಜಾರಿಯಲ್ಲಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಯ ಆಂಗ್ಲ ಭಾಷಾ ಪರೀಕ್ಷೆ ಬಾಕಿಯಾಗಿತ್ತು. ಇದೀಗ ಬಾಕಿಯಾಗಿರುವ ದ್ವಿತೀಯ ಪಿಯುಸಿಯ ಒಂದು ಪರೀಕ್ಷೆಯನ್ನು ಜೂನ್ ತಿಂಗಳಲ್ಲಿ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಲಾಕ್ ಡೌನ್ ಕಾರಣದಿಂದ ಅನ್ಯ ಜಿಲ್ಲೆಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ, ಇಲಾಖೆ ಅನುಕೂಲ ಕಲ್ಪಿಸಿದ್ದು ವಿದ್ಯಾರ್ಥಿಗಳು ಎಲ್ಲಿರುವರೋ ಅಲ್ಲಿಂದಲೇ ಪರೀಕ್ಷೆ ಬರೆಯಬಹುದಾಗಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಇದಕ್ಕೆ ಸಂಬಂಧಿಸಿದಂತೆ ಸುತ್ತೋಲೆ ಹೊರಡಿಸಿದ್ದು, ಲಾಕ್ ಡೌನ್ ಕಾರಣದಿಂದ ಅನ್ಯ ಜಿಲ್ಲೆಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಅಲ್ಲಿಂದಲೇ ಪರೀಕ್ಷೆ ಬರೆಯಲು ಇಚ್ಛಿಸಿದರೆ, ಇಲಾಖೆಗೆ ವಿದ್ಯಾರ್ಥಿಗಳು ಇ-ಮೇಲ್ ಮಾಡಲು ಸೂಚಿಸಿದೆ.
ಲಾಕ್ ಡೌನ್ ಘೋಷಣೆಯಾಗುವ ಮೊದಲೇ ದ್ವಿತೀಯ ಪಿಯುಸಿಯ ಆಂಗ್ಲ ಭಾಷಾ ವಿಷಯವನ್ನು ಹೊರತುಪಡಿಸಿ ಉಳಿದ ಎಲ್ಲಾ ವಿಷಯಗಳ ಪರೀಕ್ಷೆಗಳು ನಡೆದಿದ್ದವು. ಮಾರ್ಚ್ 23 ರಂದು ನಡೆಯಬೇಕಿದ್ದ ಅಂಗ್ಲ ಭಾಷೆಯ ಪರೀಕ್ಷೆ ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದು, ಇದೀಗ ಜೂನ್ ನಲ್ಲಿ ಪರೀಕ್ಷೆ ಮಾಡಲು ಇಲಾಖೆ ತಯಾರಿ ನಡೆಸಿದೆ ಮತ್ತು ಪರೀಕ್ಷಾ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.








