ಬೆಂಗಳೂರು: ಕೊರೊನಾ ಯಾವ ಜಾತಿ-ಧರ್ಮ ನೋಡಿ ಬರ್ತಿಲ್ಲ. ಒಂದೇ ಸಮುದಾಯದತ್ತ ಬೆರಳು ಮಾಡಿ ತೋರಿಸಬೇಡಿ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಲಾಕ್ ಡೌನ್ ಆದೇಶವನ್ನು ಅನುಸರಿಸುತ್ತಿದ್ದೇವೆ. ನಾವ್ಯಾರು ಮಸೀದಿ ಕಡೆ ತಲೆ ಹಾಕುತ್ತಿಲ್ಲ. ಮನೆಗಳಲ್ಲೇ ನಮಾಜ್ ಮಾಡ್ತಿದ್ದೇವೆ. ಶೀಘ್ರದಲ್ಲೇ ಬರುವ ರಂಜಾನ್ ಹಬ್ಬವನ್ನೂ ನಾವು ಮನೆಯಲ್ಲೇ ಮಾಡಿಕೊಳ್ತೇವೆ. ಇದನ್ನ ಸಿಎಂ ಸಭೆಯಲ್ಲೂ ತಿಳಿಸಿದ್ದೇವೆ. ಆದರೆ ಇವತ್ತು ಒಂದೇ ಸಮುದಾಯದ ಬಗ್ಗೆ ವರದಿಗಳು ಬರ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, ಇಂಗ್ಲೆಂಡ್, ಅಮೆರಿಕಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೋಂಕಿಗೊಳಗಾಗಿದ್ದಾರೆ. ಎಲ್ಲಿಯೂ ಜಾತಿ ಧರ್ಮ ಎಂದು ಯಾರು ಬೊಟ್ಟು ಮಾಡಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಒಂದೇ ಸಮುದಾಯದವರತ್ತ ಬೊಟ್ಟು ಮಾಡಲಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕುವಂತೆ ಸರ್ಕಾರಕ್ಕೆ ಸಿ.ಎಂ.ಇಬ್ರಾಹಿಂ ಮನವಿ ಮಾಡಿದರು.








