Mayank Agarwal | ಮಯಾಂಕ್ ಗೆ ಕ್ಯಾಪ್ಟನ್ಸಿ ಬೇಕಿತ್ತಾ..?
ಮಯಾಂಕ್ ಅಗರ್ ವಾಲ್ ಅಪ್ಪಟ ಕರ್ನಾಟಕದ ಪ್ರತಿಭೆ. ಬೆಂಗಳೂರಿನ ಗಲ್ಲಿಗಳಲ್ಲಿ ಕ್ರಿಕೆಟ್ ಆಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಂ ಇಂಡಿಯಾವನ್ನ ಪ್ರತಿನಿಧಿಸುತ್ತಿರುವ ಆಟಗಾರ. ಕ್ರಿಕೆಟ್ ನ ಯಾವುದೇ ಮಾದರಿ ಇರಲಿ ಸಂದರ್ಭಕ್ಕ ತಕ್ಕಂತೆ ಬ್ಯಾಟ್ ಬೀಸುವುದು ಮಯಾಂಕ್ ಅಗರ್ ವಾಲ್ ವಿಶೇಷತೆ…! ಹೀಗಾಗಿಯೇ ಟೀಂ ಇಂಡಿಯಾದ ಪರ ಟೆಸ್ಟ್ ಕ್ರಿಕೆಟ್ ತಂಡದ ಆರಂಭಕರಾಗಿದ್ರೂ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿವಿಧ ಫ್ರಾಂಚೈಸಿಗಳಲ್ಲಿ ಮಿಂಚು ಹರಿಸಿದ್ದಾರೆ.
ಕಳೆದ ವರ್ಷದವರೆಗೂ ಮಯಾಂಕ್ ಒಬ್ಬ ಬ್ಯಾಟರ್ ಆಗಿ ಮಾತ್ರ ಪಂಜಾಬ್ ತಂಡದಲ್ಲಿದ್ದರು. ಆದ್ರೆ ಕೆ.ಎಲ್.ರಾಹುಲ್ ತಂಡದಿಂದ ಕಾಲು ಹೊರಗಿಟ್ಟ ಪರಿಣಾಮ ಮಯಾಂಕ್ ಅಗರ್ ವಾಲ್ ಗೆ ಕ್ಯಾಪ್ಟನ್ಸಿ ಪಟ್ಟ ಒಲಿದು ಬಂತು. ಇದು ಎಷ್ಟು ನಿರೀಕ್ಷಿತವಾಗಿತ್ತೋ ಅಷ್ಟೇ ಅಚ್ಚರಿಗೂ ಕಾರಣವಾಗಿದೆ. ಯಾಕಂದರೇ ಮಯಾಂಕ್ ಕೇವಲ ಬ್ಯಾಟರ್ ಆಗಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಮಿಂಚಿದ್ದರು. ಒಂದೆರಡು ಪಂದ್ಯಗಳಲ್ಲಿ ಮಾತ್ರ ಪಂಜಾಬ್ ತಂಡವನ್ನ ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಮಯಾಂಕ್ ನಾಯಕನ ಜವಾಬ್ದಾರಿ ತಿಳಿದು ಬ್ಯಾಟ್ ಬೀಸಿದ್ದರು. ಬಹುಶಃ ಇದೇ ಕಾರಣಕ್ಕೆ ಪಂಜಾಬ್ ಫ್ರಾಂಚೈಸಿ ಅವರಿಗೆ ನಾಯಕನ ಸ್ಥಾನ ನೀಡಿರಬಹುದು.
ಆದ್ರೆ 15 ಸೀಸನ್ ನಲ್ಲಿ ಮಯಾಂಕ್ ನಾಯಕನಾಗಿ ಪರವಾಗಿಲ್ಲ ಅನಿಸಿದ್ರೂ ಬ್ಯಾಟಿಂಗ್ ನಲ್ಲಿ ಘನಘೋರ ವೈಫಲ್ಯ ಅನುಭವಿಸುತ್ತಿದ್ದಾರೆ. ಪಂಜಾಬ್ ತಂಡ ಈ ಐಪಿಎಲ್ ನಲ್ಲಿ ನಾಲ್ಕು ಪಂದ್ಯಗಳನ್ನಾಡಿದೆ. ಈ ನಾಲ್ಕು ಪಂದ್ಯಗಳನ್ನ ಸೇರಿ ಮಯಾಂಕ್ ಗಳಿಸಿರೋದು ಕೇವಲ 42 ರನ್ ಮಾತ್ರ..!! ಮೊದಲ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ 32 ರನ್ ಗಳಿಸಿದ್ದ ಮಯಾಂಕ್, ನಂತರದ ಪಂದ್ಯದಲ್ಲಿ ಎರಡಂಕಿ ಮುಟ್ಟಲೇ ಇಲ್ಲ. ಶುಕ್ರವಾರ ನಡೆದ ಗುಜರಾತ್ ವಿರುದ್ದದ ಪಂದ್ಯದಲ್ಲೂ ಮಯಾಂಕ್ ಕೇವಲ 5 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಹೀಗಾಗಿ ನಾಯಕತ್ವದ ಒತ್ತಡ ಮಯಾಂಕ್ ಬ್ಯಾಟಿಂಗ್ ಮೇಲೆ ಬೀರುತ್ತಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಪಡುತ್ತಿದ್ದಾರೆ. ಇದೇ ವಿಚಾರವಾಗಿ ಸ್ಪಂದಿಸಿರುವ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್, ‘‘ಮಯಾಂಕ್ ಮೇಲೆ ನಾಯಕತ್ವದ ಪ್ರಭಾವ ಹೆಚ್ಚಾಗಿದೆ. ಆ ಅಂಶ ಸ್ಪಷ್ಟವಾಗಿ ಅರ್ಥವಾಗುತ್ತಿದೆ. ನಾಲ್ಕು ಪಂದ್ಯಗಳಲ್ಲಿ ಕೇವಲ 42 ರನ್ ಗಳಿಸಿದ್ದಾರೆ. ಓಪನರ್ ಆಗಿ ಬರುತ್ತಿರುವ ಮಯಾಂಕ್ ಗೆ ಇದು ಸರಿ ಹೊಂದುವುದಿಲ್ಲ . ಕಳೆದ ಸೀಸನ್ ನಲ್ಲಿ ಕಾಣಿಸಿಕೊಂಡಿದ್ದ ಮಯಾಂಕ್ ಈಗ ಕಾಣಿಸುತ್ತಿಲ್ಲ ಎಂದು ಅಭಿಪ್ರಾಯಪಡುತ್ತಿದ್ದಾರೆ.
ಇದು ಹೀಗೆ ಮುಂದುವರೆದೇ ಮಯಾಂಕ್ ಬ್ಯಾಟಿಂಗ್ ಮರೆತು ಹೋಗುವ ಸಾಧ್ಯತೆಗಳಿವೆ. ಅವರನ್ನು ತಕ್ಷಣವೇ ನಾಯಕತ್ವದಿಂದ ಕೆಳಗಿಳಸಬೇಕು ಎಂದು ಸೆಹ್ವಾಗ್ ಸಲಹೆ ನೀಡಿದ್ದಾರೆ.
ಅಂದಹಾಗೆ ಕಳೆದ ವರ್ಷ ಪಂಜಾಬ್ ತಂಡದ ನಾಯಕರಾಗಿ ರಾಹುಲ್ ಇದ್ದರು, ಹೀಗಾಗಿ ಮಯಾಂಕ್ ಮುಕ್ತವಾಗಿ ಬ್ಯಾಟ್ ಬೀಸುತ್ತಿದ್ದರು.









