ಪ್ರಕೃತಿ ವೈಪರೀತ್ಯದಿಂದಲೋ ಇಲ್ಲವೇ ಮಾನವನ ದೂರಗಾಮಿತ್ವದ ಯೋಚನೆಯ ಅಜ್ಞಾನದ ಚಟುವಟಿಕೆಯಿಂದಲೂ ಇಂದು ಕೊರೋನಾ ವೈರಸ್ ಇಡೀ ವಿಶ್ವದ ಮನುಕುಲವನ್ನೆ ಗಟ ಗಟನೇ ಅಪೋಶನಗೈಯಲು ಮುಂದಡಿಯಿಡುತ್ತಿದೆ. ಆದರೆ ಹಿಂದೆಂದೂ ಕಂಡು ಕೇಳಿರಿಯದ ಈ ಸಂದಿಗ್ಧತೆ ಇಡೀ ಜಗತ್ತಿಗೆ ಗರ ಬಡಿದಂತಾಗಿ ಎಲ್ಲೆಲ್ಲೂ ಪಾರಾಗುವ ಬಗೆಗೆ ಕಾರ್ಯಪ್ರವೃತರಾಗಿದ್ದಾರೆ. ಈ ಸಂದರ್ಭದಲ್ಲಿ ಜಗತ್ತಿನ ಪ್ರತೀ ವ್ಯಕ್ತಿ ಸ್ವಯಂ ಆರೋಗ್ಯ ಜಾಗೃತಿ ತನ್ನ ಸುತ್ತ ಮುತ್ತಲಿನ ಸಮುದಾಯವನ್ನು ಈ ಮಹಾಮಾರಿಯಿಂದ ರಕ್ಷಿಸಿದಂತೆಯೇ ಎಂದು ಹೇಳಬಹುದು.
ಇದೀಗ ದಿನ ಬೆಳಗಾಗುವಲ್ಲಿಂದ ಪ್ರಾರಂಭಗೊಂಡು ದಿನದಂತ್ಯಕ್ಕೆ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಮುಂದುವರಿಯುತ್ತಿರುವುದು ಎಲ್ಲರನ್ನೂ ಆತಂಕಕ್ಕೀಡು ಮಾಡಿದಲ್ಲದೇ ಸಮರೋಪಾದಿಯಲ್ಲಿ ಪರಿಹಾರ ಹಾಗೂ ಸೋಂಕು ನಿರ್ಮೂಲನಕ್ಕೆ ಹೈ ಅಲರ್ಟ್ ಘೋಷಣೆಯಾಗಿದೆ. ಮರಣಮೃದಂಗದ ಧ್ವನಿ ಕರ್ಕಶವಾಗುತ್ತಲೇ ತನ್ನ ಅಟ್ಟಹಾಸವನ್ನು ಮೆರೆಸುತ್ತಿದೆ.
ಬಂದಿರುವ ಆತಂಕವೇನೇ ಇದ್ದರೂ ಅಂತ್ಯವಿಲ್ಲದ ಪ್ರಶ್ನೆಯಾಗಲೂ ಅಥವಾ ಉತ್ತರವಿಲ್ಲದಿರಲೂ ಸಾಧ್ಯವೇ ಇಲ್ಲ. ಖಂಡಿತವಾಗಿಯೂ ಆದಷ್ಟು ಬೇಗ ದೇಶ ಆರೋಗ್ಯಕರವಾಗಿ ತನ್ನ ಗೌರವವನ್ನು ಕಾಣಲಿದೆ. ಸವಾಲಾಗಿರುವ ಈ ವೈರಸ್ ವೈದಕೀಯ ವಿಜ್ಞಾನದ ಸಂಶೋಧನೆ ಔಷಧಿ ಖಂಡಿತ ಸಿಗಲಿದೆ. ಆದರೆ ಹಳ್ಳಿ ನಗರದಿಂದ ಬಹಳಷ್ಟು ಜನಸಂಖ್ಯೆ ಹಾಗೂ ಪ್ರತೀ ವಿಚಾರವನ್ನು ಸಮದೂಗಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪರವರ ಅಪಾರ ಕಾಳಜಿ ನಾವೆಲ್ಲರೂ ಗಮನಿಸುತ್ತಿದ್ದೇವೆ. ಇದೀಗ ರಾಜ್ಯ ಮತ್ತು ದೇಶ ತಲ್ಲಣಗಳನ್ನು ಕಂಡು ಎಲ್ಲಾ ರಾಜಕೀಯ ಪಕ್ಷಗಳ ನೇತಾರರು ಪಕ್ಷ ಭೇದ ಮರೆತು ಸರಕಾರದ ಕೈಜೋಡಿಸಿರುವುದು ಮಾನವೀಯತೆಯ ಹೆಗ್ಗುರುತಾಗಿದೆ.
ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮತ್ತೊಮ್ಮೆ ತುರ್ತುಪರಿಸ್ಥಿತಿಯ ಕರಾಳ ಛಾಯೆ ಮೂಡಬಹುದು. ವೈದ್ಯರೇ ಕೈಸೋತು ಹೋಗಬಹುದು, ಆಹಾರದ ಅಭಾವ ಕಾಡಬಹುದು, ಅಸೌಖ್ಯದಿಂದ ಪರಿಸರವೇ ಕಲುಷಿತವಾಗಬಹುದು. ವಸತಿ ವ್ಯವಸ್ಥೆಯ ಕೊರತೆ ಕಾಡಬಹುದು, ಜೊತೆಯಲ್ಲಿ ಬರ ಬರುತ್ತಾ ಎಲ್ಲವೂ ಅರಣ್ಯ ರೋದನವೇ ಆಗಿ ಮಾನವ ಸಂಪನ್ಮೂಲ ಹೇಳ ಹೆಸರಿಲ್ಲದಂತೆ ನಾಯಿಪಾಡಾಗಬಹುದು.
ಅನಿವಾರ್ಯವಾದ ಈ ಕರಾಳದಿನ ಅಂತ್ಯ ಖಂಡಿತವಾಗಿಯೂ ಆಗುತ್ತದೆ. ಆದರೆ ಸ್ವಚ್ಛತೆ, ಆಹಾರ, ಸಾಮಾಜಿಕ ಅಂತರ ಬಗೆಗಿನ ಕಾಳಜಿ ಈ ಮಾರಿಯ ಪಾಲಿಗೆ ಪಾಶವೆಂಬುದನ್ನು ಅರಿತುಕೊಳೋಣ. ಕೊನೆಯದಾಗಿ ದೇಶದ ವೈದ್ಯರಿಗೆ ನರ್ಸುಗಳಿಗೆ, ಆಶಾಕಾರ್ಯಕರ್ತರಿಗೆ, ಪತ್ರಿಕಾ ಮಾಧ್ಯಮದವರಿಗೆ, ಟಿ ವಿ ಮಾಧ್ಯಮದವರಿಗೆ , ಕಟ್ಟಡ ಮಾಲೀಕರಿಗೆ ವಂದನೆಯನ್ನು ಸಲ್ಲಿಸೋಣ. ದೇಶದ ಪೊಲೀಸ್ ಇಲಾಖೆಯವರು ಪ್ರತೀ ಕ್ಷಣದ ಯಾವುದೇ ವಿಷಯಗಳಿಗೂ ಕಾನೂನಿನ ಚೌಕಟ್ಟಿನಲ್ಲಿ ಶಾಂತಿ ನಿರ್ಮಾಣ ಮಾಡುತ್ತಿರುವಾಗಲೇ ಈ ವಿಷಯದಲ್ಲೂ ದಣಿಯವರಿಯದೇ ಕಾರ್ಯ ನಿರ್ವಹಿಸುವ ಬಗೆ ಶ್ಲಾಘನೀಯ. ನಮ್ಮ ರಕ್ಷಣಾ ಇಲಾಖೆ ನಮ್ಮ ಹೆಮ್ಮೆ. ಕೊನೆಯದಾಗಿ ಎಲ್ಲರೂ ಮತ್ತೊಮ್ಮೆ ನಿರಾಂತಕವಾಗಿ ನಿರಾಳವಾಗಿ ಎಂದಿನಂತೆ ಇರುವ ಜನಜೀವನ ಕಂಡುಬರಲಿ….
ಗಣೇಶ್ ಜಾಲ್ಸೂರು








