ಜಮ್ಮು: ರಣಜಿ ಟ್ರೋಪಿಯ ಕ್ವಾರ್ಟರ್ ಫೈನಲ್ ನಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ಕರ್ನಾಟಕ ತಂಡದ ಗೆಲುವಿನ ನಗಾರಿ ಬಾರಿಸಿದೆ. ಕ್ವಾರ್ಟರ್ ಫೈನಲ್ ನಲ್ಲಿ ಜಮ್ಮು ಕಾಶ್ಮೀರ ತಂಡವನ್ನು ಕರ್ನಾಟಕ ತಂಡ ಭರ್ಜರಿ 167ರನ್ ಗಳ ಅಂತರದಲ್ಲಿ ಮಣಿಸಿ ಸೆಮಿ ಫೈನಲ್ ಪ್ರವೇಶ ಮಾಡಿದೆ. ಇಂದು ಮುಕ್ತಾಯಗೊಂಡ ಪಂದ್ಯದಲ್ಲಿ ಕರ್ನಾಟಕ ನೀಡಿದ್ದ 331 ರನ್ ಗಳ ಬೃಹತ್ ಸವಾಲನ್ನು ಬೆನ್ನು ಹತ್ತಿದ ಜಮ್ಮು ಮತ್ತು ಕಾಶ್ಮೀರ ತಂಡ, ಕರ್ನಾಟಕದ ಬೌಲರ್ ಗಳ ಮಾರಕ ಬೌಲಿಂಗ್ ಗೆ ತತ್ತರಿಸಿ ಕೇವಲ 164ರನ್ ಗಳಿಗೆ ಆಲೌಟ್ ಆಯಿತು. ಅದರಲ್ಲೂ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಕರ್ನಾಟಕದ ಕೆ ಗೌತಮ್ ಇನ್ನಿಲ್ಲದಂತೆ ಕಾಡಿದರು. ಗೌತಮ್ ಬರೊಬ್ಬರಿ 7 ವಿಕೆಟ್ ಪಡೆಯುವ ಮೂಲಕ ಕರ್ನಾಟಕದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
ಇನ್ನು ಸೆಮಿ ಫೈನಲ್ ನಲ್ಲಿ ಕರ್ನಾಟಕ ಪ್ರಬಲ ಬಂಗಾಳ ತಂಡವನ್ನು ಎದುರಿಸಲಿದೆ.