ಬೆಂಗಳೂರು, ಜೂನ್ 6: ಹಿರಿಯ ಪತ್ರಕರ್ತರಾದ ಡಾ. ಯು.ಬಿ. ರಾಜಲಕ್ಷ್ಮಿ ಅವರು ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ 37 ವರ್ಷಗಳಿಂದ ಪತ್ರಿಕಾರಂಗದ ಸೇವೆಯಲ್ಲಿರುವ ಡಾ. ಯು.ಬಿ. ರಾಜಲಕ್ಷ್ಮಿ ಉಡುಪಿಯ ಜಿಲ್ಲೆಯ ಕಾರ್ಕಳದವರಾದ ಇವರು ಹೊಸ ದಿಗಂತ, ಮುಂಗಾರು, ಟೈಮ್ಸ್ ಆಫ್ ಡೆಕ್ಕನ್ ದಿನಪತ್ರಿಕೆಗಳಲ್ಲಿ ಕೆಲಸಮಾಡಿ 1987 ರಲ್ಲಿ ತರಂಗ ವಾರಪತ್ರಿಕೆಯಲ್ಲಿ ಸೇವೆ ಆರಂಭಿಸಿ ಈಗ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಯು.ಬಿ. ರಾಜಲಕ್ಷ್ಮಿ ಇವರು ಮೈಸೂರು ವಿವಿಯಲ್ಲಿ ಕನ್ನಡ ಎಂ.ಎ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪಡೆದು ಹಂಪಿ ವಿವಿ ಡಾಕ್ಟರೇಟ್ ಪಡೆದಿದ್ದಾರೆ. ಹಲವು ಕೃತಿಗಳನ್ನು ರಚಿಸಿರುವ ಇವರು ಸಾಕ್ಷ್ಯಚಿತ್ರಗಳನ್ನು ಕೂಡ ನಿರ್ದೇಶಿಸಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯಗಳಲ್ಲಿ ಪರಿಣತಿ ಹೊಂದಿರುವ ಇವರು ಮಲೇಷ್ಯಾ ಸರ್ಕಾರದ ಆಹ್ವಾನದ ಮೇಲೆ ಅಧ್ಯಯನ ಪ್ರವಾಸ ಕೈಗೊಂಡಿದ್ದರು.
ಪ್ರತಿಕಾರಂಗದ ಸಾಧನೆಯನ್ನು ಪರಿಗಣಿಸಿ ಡಾ. ಯು.ಬಿ. ರಾಜಲಕ್ಷ್ಮಿ ಅವರಿಗೆ ಖಾದ್ರಿ ಶಾಮಣ್ಣ ಟ್ರಸ್ಟ್ ಈ ವರ್ಷದ ಪ್ರಶಸ್ತಿಯನ್ನು ನೀಡುತ್ತಿದ್ದು, ಪ್ರಶಸ್ತಿ 15 ಸಾವಿರ ರೂ. ನಗದು ಹಾಗೂ ಫಲಕ ಹೊಂದಿರುತ್ತದೆ.








