ಮಣಿಪುರದಲ್ಲಿ ನಿತೀಶ್ ಗೆ ಹಿನ್ನಡೆ – BJP ಸೇರ್ಪಡೆಗೊಂಡ ಐವರು ಜೆಡಿಯೂ ಶಾಸಕರು. ..
ಮಣಿಪುರದಲ್ಲಿ ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷದ ಮಣಿಪುರದ 6 ಶಾಸಕರ ಪೈಕಿ ಐವರು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮಣಿಪುರ ವಿಧಾನಸಭೆಯ ಗೌರವಾನ್ವಿತ ಸ್ಪೀಕರ್ ಅವರು ಭಾರತದ ಸಂವಿಧಾನದ ಹತ್ತನೇ ಶೆಡ್ಯೂಲ್ ಅಡಿಯಲ್ಲಿ ಮಣಿಪುರ ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷಕ್ಕೆ JD(U) ನ ಶಾಸಕಾಂಗ ಪಕ್ಷದ ಸದಸ್ಯರ ವಿಲೀನವನ್ನ ಸಮ್ಮತಿಸಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಮೇಘಜಿತ್ ಸಿಂಗ್ ತಿಳಿಸಿದ್ದಾರೆ.
ಈ ವರ್ಷ ಮಾರ್ಚ್ ತಿಂಗಳಲ್ಲಿ ನಡೆದ ಮಣಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ 38 ಕ್ಷೇತ್ರಗಳ ಪೈಕಿ 6 ಸ್ಥಾನಗಳನ್ನ ಗೆದ್ದಿತ್ತು. ಇದೀಗ ಬಿಜೆಪಿ ಸಖ್ಯ ಬಯಸಿದ ಐದು ಮಂದಿ ಶಾಸಕರೆಂದರೆ, ಖುಮುಚ್ಚಮ್ ಜೋಯ್ಕಿಸನ್ ಸಿಂಗ್, ನ್ಗುರ್ಸಂಗಿಯುರ್ ಸನೇಟ್, ಎಂಡಿ ಅಚಾಬ್ ಉದ್ದೀನ್, ತಂಗ್ಜಮ್ ಅರುಣ್ಕುಮಾರ್ ಮತ್ತು ಎಲ್ಎಂ ಖೌಟೆ.
ಈಶಾನ್ಯ ಭಾಗದಲ್ಲಿ ನಿತೀಶ್ ಕುಮಾರ್ ಅವರ ಪಕ್ಷದಿಂದ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವುದು ಇದು 2ನೇ ಬಾರಿಯಾಗಿದೆ. 2020ರಲ್ಲಿ ಅರುಣಾಚಲ ಪ್ರದೇಶದಲ್ಲಿ 7 ಜೆಡಿಯು ಶಾಸಕರ ಪೈಕಿ 6 ಮಂದಿ ಬಿಜೆಪಿ ಸೇರಿದ್ದರು.








