ರೆಮ್’ಡೆಸಿವಿರ್ ಚುಚ್ಚುಮದ್ದನ್ನು 30,000 ರೂ.ಗೆ ಮಾರಾಟ ಮಾಡುತ್ತಿದ್ದ ಏಳು ಜನರ ಬಂಧನ
ಮುಂಬೈ, ಜುಲೈ 19: ರೆಮ್’ಡೆಸಿವಿರ್ ಚುಚ್ಚುಮದ್ದನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಏಳು ಜನರನ್ನು ಮುಂಬೈ ನ ಉಪನಗರ ಮುಲುಂಡ್ ನಲ್ಲಿ ಭಾನುವಾರ ಬಂಧಿಸಲಾಗಿದೆ .
ಕೋವಿಡ್-19 ಚಿಕಿತ್ಸೆಗೆ ಚುಚ್ಚುಮದ್ದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೆಮ್’ಡೆಸಿವಿರ್ ಚುಚ್ಚುಮದ್ದಿನ ಎಂ.ಆರ್.ಪಿ 5,400 ರೂ. ಆಗಿದ್ದರೆ, ಆರೋಪಿಗಳು ಇಂಜೆಕ್ಷನ್ನ ಬಾಟಲಿಯನ್ನು 30,000 ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಆಹಾರ ಮತ್ತು ಔಷಧ ಆಡಳಿತ (ಎಫ್.ಡಿಎ) ಮತ್ತು ಅಪರಾಧ ವಿಭಾಗದ ಅಧಿಕಾರಿಗಳು ಶನಿವಾರ ನಗರದಲ್ಲಿ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಬಳಿಕ ರೆಮ್ಡೆಸಿವಿರ್ ಚುಚ್ಚುಮದ್ದಿನ ದಾಸ್ತಾನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಆಹಾರ ಮತ್ತು ಔಷಧ ಆಡಳಿತ (ಎಫ್.ಡಿಎ) ಅಧಿಕಾರಿಯೊಬ್ಬರು ಶನಿವಾರ ಫೋನ್ ಮೂಲಕ ಇಂಜೆಕ್ಷನ್ ಖರೀದಿಸಲು ವ್ಯಕ್ತಿಯನ್ನು ಸಂಪರ್ಕಿಸಿದ್ದು, ಚುಚ್ಚುಮದ್ದನ್ನು ತಲುಪಿಸಲು ಉಪನಗರ ಮುಲುಂಡ್ ಬಳಿ ಬರಲು ತಿಳಿಸಿದರು. ಚುಚ್ಚುಮದ್ದನ್ನು ತಲುಪಿಸಲು ಬಂದ ಇಬ್ಬರು ವ್ಯಕ್ತಿಗಳನ್ನು ಸ್ಥಳದಲ್ಲಿ ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಅಧಿಕಾರಿ ತಿಳಿಸಿದ್ದಾರೆ.
ಅವರನ್ನು ವಿಕಾಸ್ ದುಬೆ ಮತ್ತು ರಾಹುಲ್ ಗಡಾ ಎಂದು ಗುರುತಿಸಲಾಗಿದೆ. ಅವರು ಬಹಿರಂಗಪಡಿಸಿದ ಆಧಾರದ ಮೇಲೆ, ತಯಾರಕರಾದ ಡೆಲ್ಫಾ ಫಾರ್ಮಾಸ್ಯುಟಿಕಲ್ಸ್ನ ಐದು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಅವರನ್ನು ಭವೇಶ್ ಷಾ, ಆಶಿಶ್ ಕನೋಜಿಯಾ, ರಿತೇಶ್ ತೊಂಬ್ರೆ, ಗುರ್ವಿಂದರ್ ಸಿಂಗ್ ಮತ್ತು ಸುಧೀರ್ ಪೂಜಾರಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 (ಮೋಸ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಎಫ್ಡಿಎ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.








