ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಮಲಯಾಳಂ (Mollywood) ಸಿನಿ ರಂಗದಲ್ಲಿ ರಚನೆಯಾದ ಮಾದರಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿಯೂ ತನಿಖಾ ಸಮಿತಿ ರಚಿಸುವ ಕುರಿತು ಒತ್ತಾಯ ಕೇಳಿ ಬಂದಿದೆ. ಸ್ಯಾಂಡಲ್ ವುಡ್ ನಲ್ಲೂ (Sandalwood) ‘ಫೈರ್’ ಹೆಸರಿನಲ್ಲಿ ತನಿಖಾ ಸಮಿತಿ ರಚಿಸುವ ಕುರಿತು ಸರ್ಕಾರಕ್ಕೆ ಬೇಡಿಕೆ ಇಡಲಾಗಿದೆ.
ಈಗ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ ಎಂಬ ಉದ್ದೇಶದಿಂದ ಫೈರ್ ರಚಿಸಲು ಚಿತ್ರರಂಗದ ಹಲವರು ಒತ್ತಾಯಿಸಿದ್ದಾರೆ.
ಕನ್ನಡ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ, ಲಿಂಗ ತಾರತಮ್ಯ, ಸವಾಲುಗಳು, ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಸರ್ಕಾರಕ್ಕೆ ಫೈರ್ ಸಂಸ್ಥೆ ಒತ್ತಾಯಿಸಿದೆ. ಉದ್ಯಮ ಹಾಗೂ ವಿವಿಧ ಕ್ಷೇತ್ರಗಳ 153 ನಟಿಯರು, ತಂತ್ರಜ್ಞರು, ಪತ್ರಕರ್ತರು ಅರ್ಜಿಗೆ ಸಹಿ ಹಾಕಿ ಒತ್ತಾಯಿಸಿದ್ದಾರೆ.
ಚಿತ್ರರಂಗದಲ್ಲಿ ಮಹಿಳೆಯರು ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ತರುವಂತೆ ಫೈರ್ ಸಂಸ್ಥೆ (Fire Committee) ಸಿಎಂಗೆ ಮನವಿ ಮಾಡಿದೆ. ಪೂಜಾ ಗಾಂಧಿ, ಚೈತ್ರಾ ಆಚಾರ್, ನಿಶ್ವಿಕಾ ನಾಯ್ಡು, ನೀತು ಶೆಟ್ಟಿ, ಆಶಿಕಾ ರಂಗನಾಥ್, ನಟಿ ರಮ್ಯಾ, ಮಾನ್ವಿತಾ ಕಾಮತ್, ಐಂದ್ರಿತಾ ರೈ, ನಟ ಸುದೀಪ್, ವಿನಯ್ ರಾಜ್ಕುಮಾರ್ ಸೇರಿದಂತೆ ಹಲವರು ಸಹಿ ಮಾಡಿ ಮನವಿ ಮಾಡಿದ್ದಾರೆ.