ಬೆಂಗಳೂರು : ಕೊರೊನಾ ಹರಡುವಿಕೆಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ನಿನ್ನೆ ರಾತ್ರಿಯಿಂದ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರದ ಲಾಕ್ ಡೌನ್ ಜಾರಿ ಮಾಡಿದೆ. ಲಾಕ್ ಡೌನ್ ಹಿನ್ನೆಲೆ ಜನರು ವಾರಕ್ಕೆ ಬೇಕಾಗೋ ದಿನಸಿ ವಸ್ತುಗಳ ಖರೀದಿಗೆ ಮುಗಿಬಿದ್ದು, ಆಹಾರ ಪದಾರ್ಥಗಳನ್ನು ಕೊಂಡುಕೊಂಡಿದ್ದಾರೆ. ಆದ್ರೆ ದಿನಸಿ ವಸ್ತುಗಳ ಖರೀದಿಗಿಂತ ನಗರದಲ್ಲಿ ಮದ್ಯ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಲಾಕ್ ಡೌನ್ ಹೊಡೆತಕ್ಕೆ ಮದ್ಯದಂಗಡಿ ಶೇಕ್..!
ಬೆಂಗಳೂರಿನಲ್ಲಿ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಮದ್ಯ ಪ್ರಿಯರು ಬಾರ್ ಗಳ ಮುಂದೆ ಸಾಲು ಗಟ್ಟಿ ಗಾಳಿ-ಮಳೆ ಎನ್ನದೇ ಗಂಟೆಗಟ್ಟಲೇ ನಿಂತು ಸುರಪಾನವನ್ನ ಖರೀದಿಸಿದ್ದಾರೆ. ಹೀಗಾಗಿ ಕಳೆದ ಎರಡೇ ದಿನದಲ್ಲಿ 405 ಕೋಟಿ ರೂಪಾಯಿ ಮೊತ್ತದ ಮದ್ಯ ಸೇಲ್ ಆಗಿದೆ. ಸೋಮವಾರ ಹಾಗೂ ಮಂಗಳವಾರ ಒಟ್ಟು 8.60 ಲಕ್ಷಕ್ಕೂ ಹೆಚ್ಚು ಬಾಕ್ಸ್ ಮದ್ಯ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ 215 ಕೋಟಿ ರೂಪಾಯಿ ಮೊತ್ತದ 4.89 ಲಕ್ಷ ಐ.ಎಂ.ಎಲ್ ಮಾರಾಟವಾಗಿದ್ದು, 83 ಸಾವಿರ ಬಿಯರ್ ಬಾಕ್ಸ್ ಗಳು ಪಾರ್ಸೆಲ್ ಹೋಗಿದೆ. ಇನ್ನು, ನಿನ್ನೆ ಒಂದೇ ದಿನ 160 ಕೋಟಿ ರೂಪಾಯಿಯ, 3.70 ಲಕ್ಷ ಐ.ಎಂ.ಎಲ್ ಲಿಕ್ಕರ್ ಸೇಲ್ ಆಗಿದೆ. 65 ಸಾವಿರ ಬಿಯರ್ ಬಾಕ್ಸ್ ಗಳು ಪಾರ್ಸೆಲ್ ಹೋಗಿದೆ. ಈ ಮೂಲಕ ಎಣ್ಣೆಪ್ರಿಯರು ಮದ್ಯ ಖರೀದಿಯಲ್ಲಿ ದಾಖಲೆ ಬರೆದಿದ್ದಾರೆ.








