ಗೋವು ಬೆಳಕಿಗೂ, ಬ್ರಹ್ಮ ವಿದ್ಯೆಗೂ, ಬ್ರಹ್ಮ ತೇಜಸ್ಸಿಗೂ ಸಂಕೇತ ಅಂತಾರೆ. ಹೀಗಾಗಿಯೇ ಗೋವನ್ನು ಮುಕ್ಕೋಟಿ ದೇವರಿಗೆ ಸರಿಸಮಾನವಾಗಿ ಭಾರತೀಯ ಸಂಸ್ಕೃತಿಯಲ್ಲಿ ಪೂಜಿಸಲಾಗುತ್ತಿದೆ. ಭಾರತದಲ್ಲಿ ಹಲವಾರು ಮಠಾಧೀಶರು ಗೋವು ರಕ್ಷಣೆಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಕರಾವಳಿ ಭಾಗದಲ್ಲಂತೂ ಗೋವು ರಕ್ಷಣೆಯೇ ಜೀವನದ ಉದ್ಧೇಶವಾದಂತಿದೆ. ಈಗ ಈ ಸಾಲಿಗೆ ಹಸಿರ ಸಿರಿ ನಾಡಿನ ಅಕ್ಷಯ ಆಳ್ವ ಅವರಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಬಂದು ನಿಂತಿದ್ದಾರೆ. ಗೋವು ಪ್ರಿಯರಾಗಿರುವ ಅವರು ಗೋವು ಸಂತತಿಯ ಉಳಿವಿಗೆ ಕೈ ಜೋಡಿಸಿ ನಿಂತಿದ್ದಾರೆ.
ರಾಜ್ಯ ಸೇರಿದಂತೆ ದೇಶದಲ್ಲಿ ಹಲವಾರು ತಳಿಯ ಗೋವುಗಳಿದ್ದರೂ ಶಾಲಿನಿ ರಜನೀಶ್ ಅವರು ಮಲೆನಾಡು ಗಿಡ್ಡ ತಳಿಯ ಮೇಲೆ ಆಸಕ್ತಿ ಹೊಂದಿ ತಮ್ಮ ಮನೆಯಲ್ಲಿ ಸಾಕಲು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಗೋವು ಸಾಕಾಣಿಕೆಯಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಐಎಎಸ್ ಅಧಿಕಾರಿಯಾದರೂ ಶಾಲಿನಿ ರಜನೀಶ್ ಅವರು ಗೋವು ಸಾಕುವ ಆಸಕ್ತಿ ತೋರಿಸಿದ್ದು, ಸಮಾಜಕ್ಕೆ ಒಂದು ಮಾದರಿಯೇ ಸರಿ. ಕರಾವಳಿಯ ಅಕ್ಷಯ ಆಳ್ವರ್ ಮನೆಗೆ ಬಂದ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಗಿಡ್ಡ ತಳಿಯ ಕರುವನ್ನು ಈಗ ಶಾಲಿನಿ ಅವರಿಗಾಗಿ ಆಯ್ಕೆ ಮಾಡಿದ್ದಾರೆ.
ಸುಮಾರು 25 ವರ್ಷಗಳಿಂದ ರಾಮಚಂದ್ರಾಪುರ ಮಠದಿಂದ ಗೋವು ರಕ್ಷಣೆಯ ಮಹಾಪರಂಪರೆಯ ಮುಂದುವರೆದುಕೊಂಡು ಬಂದಿದೆ. ಕಾಮದುಘಾ ಯೋಜನೆಯ ಉದ್ಘೋಷಣೆಯೇ ಮಠದ್ದಾಗಿದೆ. ಅಳಿವಿನಂಚಿನಲ್ಲಿನ ದೇಶೀಯ ಗೋವುಗಳನ್ನು ರಕ್ಷಿಸಿ, ಉಳಿಸುವುದು ಇದರ ಉದ್ಧೇಶವಾಗಿದೆ. ಈ ಕ್ರಾಂತಿಯಲ್ಲಿ ಈಗ ಹತ್ತಾರು ತಳಿಗಳ ಗೋವುಗಳನ್ನು ಸಂರಕ್ಷಿಸಿ, ಪೋಷಿಸಲಾಗುತ್ತಿದೆ. ಅಲ್ಲದೇ, ಅವುಗಳಿಂದ ಲಕ್ಷಿಸುವ ಆರೋಗ್ಯಕರ ಸಾರ ಹಲವರ ಬದುಕಿಗೆ ಆಸರೆಯಾಗಿ ನಿಲ್ಲುತ್ತಿವೆ.
ಇಲ್ಲಿ ಗೋವು ಉತ್ಪನ್ನಗಳನ್ನು ಸೃಷ್ಟಿಸಿ ಜನರ ಬದುಕಿಗೆ ಹಂಚಲಾಗುತ್ತಿದೆ. ಇದರಿಂದ ಲಾಭ ಪಡೆದವರು, ಆರೋಗ್ಯ ಪಡೆದವರು, ಬದುಕು ಹಸಿನಾಗಿಸಿಕೊಂಡವರು ಕೂಡ ಈಗ ಅದೇ ಕಾಯಕಕ್ಕೆ ಮುಂದಾಗಿದ್ದಾರೆ. ಗೋವು ಪ್ರಚಾರ ನಡೆಸಿ, ಮುಕ್ಕೋಟಿ ದೇವರ ರೂಪದ ಗೋವು ರಕ್ಷಿಸುವುದರ ಮೂಲಕ ಆರೋಗ್ಯ, ಪರಿಸರ, ಸಮಾಜ ಉಳಿಸಿಕೊಳ್ಳಲು ಟೊಂಕಕಟ್ಟಿ ನಿಲ್ಲುತ್ತಿದ್ದಾರೆ.
ಮುಖ್ಯ ಸಂಚಾಲಕರಾಗಿರುವ ಸುಳ್ಯ ತಾಲೂಕು ನಿಂತಿಕಲ್ಲು ಸಮೀಪದ ಅಲೆಕ್ಕಾಡಿಯ ಅಕ್ಷಯ ಆಳ್ವ ಅವರು ಆಸಕ್ತರಿಗೆ ಮಲೆನಾಡು ಗಿಡ್ಡ ತಳಿಯನ್ನು ನೀಡಿ, ಅದನ್ನು ಪೋಷಿಸಿ, ಬೆಳೆಸುವ ಮಹಾನ್ ಕಾರ್ಯ ಮಾಡುತ್ತಿದ್ದಾರೆ. ಕೆಲವೊಮ್ಮೆ ಆಯ್ದ ರೈತರಿಗೆ ಉಚಿತವಾಗಿ ನೀಡುತ್ತಿದ್ದಾರೆ. ಈಗ ಈ ಆಂದೋಲನಕ್ಕೆ ರೈತರು ಕೈ ಜೋಡಿಸಿದ್ದಾರೆ. ಹೀಗಾಗಿ ಅಕ್ಷಯ ಅವರ ಮಹಾನ್ ಕಾರ್ಯದಿಂದಾಗಿ ನಮ್ಮ ವಿಶೇಷ ತಳಿ ಮಲೆನಾಡು ಗಿಡ್ಡ ಜನಪ್ರಿಯತೆ ಪಡೆದು, ರೈತರ, ಜನರ ಮನೆ-ಮನಗಳಲ್ಲಿ ಸ್ಥಾನ ಪಡೆದು, ಆರೋಗ್ಯ, ಕುಟುಂಬ ಸೌಖ್ಯ, ಸಿರಿ ಕರುಣಿಸುತ್ತಿದೆ.
25 ವರ್ಷಗಳ ಹಿಂದೆ ರಾಮಚಂತ್ರಪುರ ಮಠ, ದೇಸಿ ಗೋವುಗಳ ಸಂರಕ್ಷಣೆಗೆ ಕಾಮದುಘಾ ಯೋಜನೆ ಆರಂಭಸಿತ್ತು. ಅದರ ಮುಂದಿನ ಹೆಜ್ಜೆಯಾಗಿ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ನಡೆಯುತ್ತಿದ್ದು, ಇದರ ಮುಖ್ಯ ಸಂಚಾಲಕರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ನಿಂತಿಕಲ್ಲು ಸಮೀಪದ ಅಲೆಕ್ಕಾಡಿಯ ಅಕ್ಷಯ ಆಳ್ವ ಅಭಿಮಾನವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪದವೀಧರರಾಗಿರುವ ಅಕ್ಷಯ್, ತಮ್ಮ ಹುದ್ದೆಯನ್ನು ಬಿಟ್ಟು ಮಲೆನಾಡು ಗಿಡ್ಡ ತಳಿಯ ಸಂರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಈಗಾಗಲೇ ತಮ್ಮ ಮನೆಯಲ್ಲಿ 30ಕ್ಕೂ ಹೆಚ್ಚು ಮಲೆನಾಡು ಗಿಡ್ಡ ತಳಿ ಗೋವುಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ತಮ್ಮ ಮನೆಯಲ್ಲಿ ಮಲೆನಾಡು ಗಿಡ್ಡ ತಳಿಯ ಗೋವು ಸಾಕಾಣಿಗೆ ಮುಂದಾಗಿದ್ದಾರೆ. ಅಕ್ಷಯ್ ಅವರ ಮನೆಯಿಂದ ಹಸು ಮತ್ತು ಕರುವನ್ನು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳ ಮೂಲಕ ಶಾಲಿನಿ ರಜನೀಶ್ ಅವರ ಮನೆಗೆ ಹಸ್ತಾಂತರ ಮಾಡಲಾಗಿದೆ. ಅಕ್ಷಯ್ ಆಳ್ವ ಅವರ ತಾಯಿ, ಪತ್ನಿ ಹಾಗೂ ಸಹೋದರಿಯರು ಸೇರಿ ಕುಟುಂಬಸ್ಥರು ಸಂಪ್ರದಾಯದಂತೆ ಗೋವುಗಳನ್ನು ಕಳಿಸಿಕೊಟ್ಟಿದ್ದಾರೆ. ಈ ವೇಳೆ ಮಲೆನಾಡು ಗಿಡ್ಡ ಸಂರಕ್ಷಣೆ ಮತ್ತು ಸಂವರ್ಧನಾ ಅಭಿಯಾನ ತಂಡದ ಸದಸ್ಯರು ಮತ್ತು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಈಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಲೆನಾಡು ಗಿಡ್ಡ ತಳಿಯ ಗೋವನ್ನು ಮನೆಗೆ ಬರಮಾಡಿಕೊಂಡಿದ್ದಾರೆ.