ಇಂಗ್ಲೆಂಡ್ -ಪಾಕಿಸ್ತಾನ ಮೊದಲ ಟೆಸ್ಟ್ -ಮಸೂದ್ ಶತಕದ ನಡುವೆ ಎರಡನೇ ದಿನ ಬೌಲರ್ ಗಳದ್ದೇ ಕಾರುಬಾರು..!
ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡನೇ ದಿನ ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿದೆ. ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್ ನಾಲ್ಕು ವಿಕೆಟ್ ಕಳೆದುಕೊಂಡು 92 ರನ್ ಗಳಿಸಿದೆ. ಪಾಕ್ ತಂಡದ ವೇಗದ ದಾಳಿಗೆ ಇಂಗ್ಲೆಂಡ್‍ನ ಪ್ರಮುಖ ಬ್ಯಾಟ್ಸ್ ಮೆನ್ ಗಳು ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.
ಆರಂಭಿಕ ರೋರಿ ಬನ್ರ್ಸ್ 4 ರನ್ ಗಳಿಸಿ ಶಾಹೀನ್ ಆಫ್ರಿದಿ ಅವರ ಎಲ್‍ಬಿ ಬಲೆಗೆ ಬಿದ್ರು. ನಂತರ ಡಾಮಿನಿಕ್ ಸಿಬ್ಲೇ ಅವರು ಮಹಮ್ಮದ್ ಅಬ್ಬಾಸ್ ಅವರಿಗೆ ಎಲ್‍ಬಿ ಬಲೆಗೆ ಸಿಲುಕಿದ್ರು. ನಂತರ ನಾಯಕ ಜಾಯ್ ರೂಟ್ ತಾಳ್ಮೆಯ ಆಟ ಪ್ರದರ್ಶಿಸಿದ್ರು. ಆದ್ರೆ 14 ರನ್ ಗಳಿಸುವಷ್ಟರಲ್ಲಿ ಯಾಸೀರ್ ಶಾಹ ಅವರು ಪೆವಿಲಿಯನ್ ದಾರಿ ತೋರಿಸಿದ್ರೆ, ಬೆನ್ ಸ್ಟೋಕ್ಸ್ ಶೂನ್ಯಕ್ಕೆ ಮಹಮ್ಮದ್ ಅಬ್ಬಾಸ್‍ಗೆ ಕ್ಲೀನ್
ಬೌಲ್ಡಾದ್ರು. ಎರಡನೇ ದಿನದ ಅಂತ್ಯಕ್ಕೆ ಒಲಿವ್ ಪೊಪೆ ಅಜೇಯ 46 ರನ್ ಮತ್ತು ಜೋಸ್ ಬಟ್ಲರ್ ಅಜೇಯ 15 ರನ್ ಗಳೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ತಾನ 326 ರನ್ ಗಳಿಗೆ ತನ್ನ ಮೊದಲ ಇನಿಂಗ್ಸ್ ಅನ್ನು ಮುಗಿಸಿತ್ತು. ಪಾಕ್ ತಂಡದ ಆರಂಭಿಕ ಶಾನ್ ಮಸೂದ್ ಅವರು ಆಕರ್ಷಕ 156 ರನ್ ದಾಖಲಿಸಿದ್ರು. 319 ಎಸೆತಗಳಲ್ಲಿ ಮಸೂದ್ ಅವರು 18 ಬೌಂಡರಿ ಮತ್ತು ಎರಡು ಸಿಕ್ಸರ್ ಗಳನ್ನು ಸಿಡಿಸಿದ್ರು. ಹಾಗೇ ಬಾಬರ್ ಅಝಮ್ 69 ರನ್‍ಗೆ ತನ್ನ ಹೋರಾಟವನ್ನು ಮುಗಿಸಿದ್ರು. ಇನ್ನುಳಿದ ಪಾಕ್ ಬ್ಯಾಟ್ಸ್ ಮೆನ್‍ಗಳು ಒಂದಕ್ಕಿ ಮೊತ್ತಕ್ಕೆ ಸೀಮಿತವಾದ್ರು. ಈ ನಡುವೆ ಶಾದಾಬ್ ಖಾನ್ ಮಾತ್ರ ದಿಟ್ಟ ಹೋರಾಟ ನೀಡಿ 45 ರನ್ ಗಳಿಸಿದ್ರು.
ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ ಮತ್ತು ಜೋಫ್ರಾ ಆರ್ಚರ್ ತಲಾ ಮೂರು ವಿಕೆಟ್ ಉರುಳಿಸಿದ್ರು. ಕ್ರಿಸ್ ವೋಕ್ಸ್ ಎರಡು ವಿಕೆಟ್ ಪಡೆದ್ರೆ, ಜೇಮ್ಸ್ ಆಂಡರ್ಸನ್ ಮತ್ತು ಡಾಮಿನಿಕ್ ಬೇಸ್ ತಲಾ ಒಂದು ವಿಕೆಟ್ ಕಬಳಿಸಿದ್ರು. ಒಟ್ಟಿನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಘಟ್ಟದಲ್ಲಿ ಅಂತ್ಯಗೊಳ್ಳುವುದು ಬಹುತೇಕ ಖಚಿತವಾಗಿದೆ.








