ಪ್ರಣಬ್ ಮುಖರ್ಜಿಗೆ ಮಗಳು ಶರ್ಮಿಸ್ತಾ ಮುಖರ್ಜಿ ಭಾವನಾತ್ಮಕ ಸಂದೇಶ. ಪ್ರಣಬ್ ಮುಖರ್ಜಿ ಅವರ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು ಸುಧಾರಣೆ ಯ ಯಾವ ಲಕ್ಷಣಗಳು ಕಾಣುತ್ತಿಲ್ಲ ಎಂದು ಆರ್ ಆ್ಯಂಡ್ ಆರ್ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಅವರ ಮಗಳು ಶರ್ಮಿಸ್ತಾ ಮುಖರ್ಜಿ ಟ್ವಿಟರ್ ನಲ್ಲಿ ತಂದೆಗೆ ಭಾವನಾತ್ಮಕ ಸಂದೇಶ ವನ್ನು ಟ್ವೀಟ್ ಮಾಡಿದ್ದಾರೆ.
ಹೊಸದಿಲ್ಲಿ, ಅಗಸ್ಟ್ 12: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೆದುಳಿನ ಹೆಪ್ಪುಗಟ್ಟುವಿಕೆಯ ಶಸ್ತ್ರಚಿಕಿತ್ಸೆಯ ನಂತರ ಗಂಭೀರ ಸ್ಥಿತಿಯಲ್ಲಿದ್ದು, ಅವರ ಮಗಳು ಶರ್ಮಿಸ್ತಾ ಮುಖರ್ಜಿ ತನ್ನ ತಂದೆಗೆ ಭಾವನಾತ್ಮಕ ಸಂದೇಶವನ್ನು ನೀಡಿದ್ದಾರೆ. ದೇವರು ನಿಮಗೆ ಅತ್ಯುತ್ತಮವಾದದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದು ಮುಂದೆ ಬರುವ ಯಾವುದನ್ನಾದರೂ ಸ್ವೀಕರಿಸುವ ಶಕ್ತಿಯನ್ನು ನನಗೆ ನೀಡಲಿ ಎಂದು ಬರೆದುಕೊಂಡಿದ್ದಾರೆ.

ಕಳೆದ ವರ್ಷ ಆಗಸ್ಟ್ 8 ನನ್ನ ತಂದೆ ಭಾರತ ರತ್ನವನ್ನು ಸ್ವೀಕರಿಸಿದ್ದು, ನನಗೆ ಅತ್ಯಂತ ಸಂತೋಷದಾಯಕ ದಿನವಾಗಿತ್ತು. ನಿಖರವಾಗಿ ಒಂದು ವರ್ಷದ ನಂತರ ಆಗಸ್ಟ್ 10 ರಂದು ಅವರ ಆರೋಗ್ಯ ಹದಗೆಟ್ಟಿದೆ. ದೇವರು ಅವರಿಗೆ ಉತ್ತಮವಾದದ್ದನ್ನು ಮಾಡಲಿ ಮತ್ತು ಜೀವನದ ಸಂತೋಷಗಳು ಮತ್ತು ದುಃಖಗಳನ್ನು ಸಮಚಿತ್ತತೆಯಿಂದ ಸ್ವೀಕರಿಸಲು ನನಗೆ ಶಕ್ತಿಯನ್ನು ನೀಡಲಿ. ಎಲ್ಲರ ಕಾಳಜಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಶರ್ಮಿಸ್ತಾ ಮುಖರ್ಜಿ ಟ್ವೀಟ್ ಮಾಡಿದ್ದಾರೆ.

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಅವರು ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ ಮತ್ತು ಸುಧಾರಣೆಯ ಲಕ್ಷಣಗಳನ್ನು ತೋರಿಸಿಲ್ಲ ಎಂದು ಸೇನೆಯ ಸಂಶೋಧನೆ ಮತ್ತು ರೆಫರಲ್ (ಆರ್ & ಆರ್) ಆಸ್ಪತ್ರೆ ತಿಳಿಸಿದೆ.
84 ವರ್ಷದ ಮಾಜಿ ರಾಷ್ಟ್ರಪತಿ ಮುಖರ್ಜಿ ಅವರನ್ನು ಸೋಮವಾರ ಮಧ್ಯಾಹ್ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆಗೆ ಮುನ್ನ ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.








