ಕಾಂಗ್ರೆಸ್ ಪಕ್ಷದ ಹಿರಿಯ ಸಂಸದ ಶಶಿ ತರೂರ್ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಹಾಗೂ ಸಾಂಸ್ಕೃತಿಕ ನೀತಿಗಳನ್ನು ಹೊಗಳಿದ್ದರು. ಅವರ ಈ ಅನಿರೀಕ್ಷಿತ ಮೆಚ್ಚುಗೆಯ ಮಾತುಗಳು ಕಾಂಗ್ರೆಸ್‌ನ ಒಳವಲಯದಲ್ಲೇ ದೊಡ್ಡ ಚರ್ಚೆಗೆ, ಗಾಬರಿಗೆ ಕಾರಣವಾಗಿವೆ.
ತರೂರ್ ಅವರ ಹೇಳಿಕೆ ಪಕ್ಷದ ನಿಲುವಿಗೆ ವಿರುದ್ಧವಾಗಿದೆ ಎಂದು ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಸಂಸದ ಸಂದೀಪ್ ದೀಕ್ಷಿತ್ ತೀವ್ರ ಟೀಕೆ ಮಾಡಿದ್ದಾರೆ. ತಾನು ಸೇರಿದ ಪಕ್ಷದ ನೀತಿಗಳಿಗಿಂತ ಬಿಜೆಪಿ ನೀತಿಗಳು ದೇಶದ ಅಭಿವೃದ್ಧಿಗೆ ಹೆಚ್ಚು ಸಹಾಯಕ ಎಂದು ತರೂರ್ ಅವರಿಗೆ ನಿಜವಾಗಿಯೂ ಅನಿಸುತ್ತಿದ್ದರೆ, ಅವರೇಕೆ ಕಾಂಗ್ರೆಸ್‌ನಲ್ಲಿ ಇರಬೇಕು? ನೇರವಾಗಿ ಬಿಜೆಪಿ ಸೇರಬಹುದು ಅಲ್ವಾ? ಎಂದು ಕಿಡಿ ಕಾರಿದ್ದಾರೆ.
ಈ ಘಟನೆಯು ಈಗ ಕಾಂಗ್ರೆಸ್ ಒಳರಾಜಕಾರಣದಲ್ಲಿ ಮತ್ತಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ತರೂರ್ ಅವರ ಹೇಳಿಕೆ ಉದ್ದೇಶಪೂರ್ವಕವೇ? ಅಥವಾ ವೈಯಕ್ತಿಕ ಅಭಿಪ್ರಾಯವೇ? ಎಂಬ ಪ್ರಶ್ನೆಗಳು ಪಕ್ಷದೊಳಗೆ ಕೇಳಿಬರುತ್ತಿವೆ. ಪಕ್ಷದ ಶಿಸ್ತಿಗೆ ಧಕ್ಕೆ ಉಂಟುಮಾಡಿದಂತೆ ತರೂರ್ ವರ್ತಿಸಿದ್ದಾರೆ ಎಂಬ ಅಭಿಪ್ರಾಯವೂ ಹಲವು ನಾಯಕರಲ್ಲಿ ಮೂಡಿದೆ.
ಈ ಮೂಲಕ ಕಾಂಗ್ರೆಸ್‌ನಲ್ಲಿ ಈಗ ತರೂರ್ ಹೇಳಿಕೆ ಸೃಷ್ಟಿಸಿರುವ ಬಿರುಕು ಸ್ಪಷ್ಟವಾಗುತ್ತಿದೆ. ಮುಂದೇನು ನಡೆಯಲಿದೆ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಹೆಚ್ಚಾಗಿದೆ.








