ಕಾಂಗ್ರೆಸ್ ನಾಯಕ ಶತ್ರುಘ್ನ ಸಿನ್ಹಾ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಪಾಕ್ ಗೆ ತೆರಳಿದ್ದ ವೇಳೆ ಪಾಕಿಸ್ತಾನದ ಅಧ್ಯಕ್ಷ ಅರಿಫ್ ಅಲ್ವಿರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಶತ್ರುಘ್ನ ಸಿನ್ಹಾ ಅವರು, ಪಾಕಿಸ್ತಾನದ ಉದ್ಯಮಿ ಮಿಯಾನ್ ಅಸಾದ್ ಅಹ್ಸಾನ್ ಅವರ ಆಮಂತ್ರಣದ ಮೇರೆಗೆ ವಿವಾಹ ಸಮಾರಂಭಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಶನಿವಾರ ಪಾಕಿಸ್ತಾನದ ಲಾಹೋರ್ ನಲ್ಲಿ ಅಧ್ಯಕ್ಷ ಅರಿಫ್ ಅಲ್ವಿ ಅವರನ್ನು ಭೇಟಿಯಾಗಿದ್ದಾರೆ.
ಪಾಕ್ ಅಧ್ಯಕ್ಷರು ತಮ್ಮ ಟ್ವೀಟ್ ನಲ್ಲಿ ಉಭಯ ನಾಯಕರು ಗಡಿಯುದ್ದಕ್ಕೂ ಶಾಂತಿ ಸ್ಥಾಪಿಸುವ ಕುರಿತು ಮಹತ್ವದ ಚರ್ಚೆ ನಡೆಸಿದ್ದೇವೆ ಎಂದು ತಿಳಿಸಿದರೆ, ಕಾಶ್ಮೀರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಅಲ್ವಿ ಅವರ ಕಚೇರಿ ಹೇಳಿಕೆ ನೀಡಿದೆ. ಭಾರತ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ಅನ್ನು ಕಳೆದ ವರ್ಷ ಅಗಸ್ಟ್ ನಲ್ಲಿ ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದೆ. ನಾವು ಜಮ್ಮು ಕಾಶ್ಮೀರದ ಮೇಲೆ ವಿಧಿಸಿರುವ ನಿರ್ಬಂಧದ ಕುರಿತು ವ್ಯಕ್ತಪಡಿಸಿರುವ ಕಾಳಜಿಗೆ ಶತ್ರುಘ್ನ ಸಿನ್ಹಾ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಪಾಕ್ ಅಧ್ಯಕ್ಷ ಅಲ್ವಿ ಅವರು ಟ್ವೀಟ್ ಮಾಡಿದ್ದಾರೆ.
ಶತ್ರುಘ್ನ ಸಿನ್ಹಾ ಇಂದು ಮುಂಜಾನೆ ಟ್ವೀಟ್ ಮಾಡಿದ್ದು, ಇದೊಂದು ವೈಯಕ್ತಿಕ ಭೇಟಿಯಾಗಿದ್ದು ಯಾವುದೇ ಅಧಿಕೃತ ಅಥವಾ ರಾಜಕೀಯ ಭೇಟಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳು ಸೇರಿದಂತೆ ಹಲವಾರು ವಿಷಯಗಳನ್ನು ನಾವು ಚರ್ಚಿಸಿದ್ದೇವೆ ಹೊರತು ರಾಜಕೀಯದ ಕುರಿತು ಚರ್ಚಿಸಿಲ್ಲ. ನನ್ನ ಸ್ನೇಹಿತರು, ಹಿತೈಷಿಗಳು ಮತ್ತು ಬೆಂಬಲಿಗರು ಮತ್ತು ಸಹಜವಾಗಿ ಮಾಧ್ಯಮಗಳು, ವಿದೇಶಿ ನೆಲದಲ್ಲಿ ರಾಜಕೀಯ ಅಥವಾ ಸರಕಾರಿ ಅಧಿಕಾರ ಹೊಂದಿಲ್ಲದಿರುವಾಗ ಒಬ್ಬರು ದೇಶಗಳ ನೀತಿಗಳ ಕುರಿತು ಚರ್ಚಿಸಬಾರದು ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಿನ್ಹಾ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.








