ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ ಮತ್ತೆ ಇಂಧನ ದರ ಏರಿಕೆ ಮಾಡಿದ್ದು, ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ.
ಕಳೆದ 15 ದಿನಗಳಲ್ಲಿ ಮೂರನೇ ಬಾರಿ ದರ ಹೆಚ್ಚಳ ಮಾಡಿರುವ ಶೆಲ್, ಇದೀಗ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಸಿದೆ. ಸಾಮಾನ್ಯ ಪೆಟ್ರೋಲ್ ದರ ಮೊದಲು ₹106 ಇತ್ತು, ನಂತರ ₹108.50ಕ್ಕೆ ಏರಿಕೆ ಆಗಿತ್ತು. ಕೇವಲ 4 ದಿನಗಳ ಹಿಂದೆ ₹112ಕ್ಕೆ ಏರಿಕೆ ಮಾಡಲಾಗಿದ್ದು, ಈಗ ಮತ್ತೊಮ್ಮೆ ₹119.8ಕ್ಕೆ ಏರಿಕೆಯಾಗಿದೆ. ಅಂದರೆ, ಲೀಟರ್ಗೆ ಸುಮಾರು ₹7 ಹೆಚ್ಚಳವಾಗಿದೆ.
ಇದೇ ವೇಳೆ ಪ್ರೀಮಿಯಂ ಪೆಟ್ರೋಲ್ ದರವೂ ₹122.42ರಿಂದ ₹129.8ಕ್ಕೆ ಏರಿಕೆಯಾಗಿದೆ. ಈ ನಿರಂತರ ದರ ಏರಿಕೆಯಿಂದ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಖಾಸಗಿ ಬಂಕ್ಗಳ ದರ ನೀತಿ ಕುರಿತು ಪ್ರಶ್ನೆಗಳು ಎದ್ದಿವೆ.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಾಗಿ, ಅದರ ಪರಿಣಾಮವಾಗಿ ದೈನಂದಿನ ಅಗತ್ಯ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.








