ಸಿಂಹಳಿಯರ ನಾಡಿನಲ್ಲಿ ಕಠಿಣ ಅಭ್ಯಾಸದಲ್ಲಿ ನಿರತರಾಗಿರುವ ರಾಹುಲ್ ಬಾಯ್ಸ್..!
ಶಿಖರ್ ಧವನ್ ಸಾರಥ್ಯದ ಟೀಮ್ ಇಂಡಿಯಾ ಆಟಗಾರರು ಕೊಲೊಂಬೊ ದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾದ ಹುಡುಗರು ಹೊನಲು ಬೆಳಕಿನಡಿಯಲ್ಲಿ ನೆಟ್ಸ್ ನಲ್ಲಿ ತಾಲಿಮು ನಡೆಸಿದ್ರು.
ಜುಲೈ 18ರಿಂದ ಏಕದಿನ ಸರಣಿ ಆರಂಭವಾಗಲಿದೆ. ಶ್ರೀಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಮತ್ತು ಡಾಟ ತಂತ್ರಜ್ಞ ಜಿ.ಟಿ.ನಿರೋಶಾನ್ ಅವರಿಗೆ ಕೋವಿಡ್ ಸೋಂಕು ಪತ್ತೆಯಾಗಿರುವುದರಿಂದ ಏಕದಿನ ಸರಣಿ ಮತ್ತು ಟಿ-ಟ್ವೆಂಟಿ ಸರಣಿಯ ವೇಳಾಪಟ್ಟಿಯನ್ನು ಮುಂದೂಡಲಾಗಿತ್ತು. ಈ ಹಿಂದೆ ಸರಣಿಯು ಜುಲೈ 14ರಿಂದ ನಿಗದಿಪಡಿಸಲಾಗಿತ್ತು. ಇದೀಗ ಮೊದಲ ಏಕದಿನ ಪಮದ್ಯ ಜುಲೈ 18, ನಂತರದ ಎರಡು ಪಂದ್ಯಗಳು ಕ್ರಮವಾಗಿ ಜುಲೈ 21 ಮತ್ತು 23ರಂದು ನಡೆಯಲಿದೆ. ಹಾಗೇ ಟಿ-ಟ್ವೆಂಟಿ ಸರಣಿಯ ಮೊದಲ ಪಂದ್ಯ ಜುಲೈ 25, 27 ಮತ್ತು 29 ರಂದು ನಡೆಯಲಿದೆ.
ಯಂಗ್ ಟೀಮ್ ಇಂಡಿಯಾದ ಸಾರಥ್ಯವನ್ನು ಶಿಖರ್ ಧವನ್ ವಹಿಸಿದ್ರೂ ಎಲ್ಲರ ಚಿತ್ತವಿರುವುದು ಕೋಚ್ ರಾಹುಲ್ ದ್ರಾವಿಡ್ ಅವರ ಮೇಲೆ. ತಂಡದಲ್ಲಿರುವ ಹೆಚ್ಚಿನ ಆಟಗಾರರಿಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ದೇವದತ್ ಪಡಿಕ್ಕಲ್, ಚೇತನ್ ಸಕಾರಿಯಾ ಸೇರಿದಂತೆ ಐದಾರು ಆಟಗಾರರು ತನ್ನ ಬಹುದಿನಗಳ ಕನಸನ್ನು ಈ ಸರಣಿಯಲ್ಲಿ ನನಸು ಮಾಡಿಕೊಳ್ಳಲಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲು ಈ ಸರಣಿ ವರದಾನವಾಗಲಿದೆ. ಇನ್ನೊಂದೆಡೆ ರಾಹುಲ್ ದ್ರಾವಿಡ್ ಈ ಸರಣಿಯಲ್ಲಿ ಯಶ ಸಾಧಿಸಿದ್ರೆ, ಟೀಮ್ ಇಂಡಿಯಾದ ಹೆಡ್ ಕೋಚ್ ಆಗೋದು ಬಹುತೇಕ ಪಕ್ಕಾ.








