ಶಿವಮೊಗ್ಗ: ಶಿವಮೊಗ್ಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಲವೆಡೆ ಅನಾಹುತಗಳು ಸಂಭವಿಸಿದೆ. ಮಳೆಯಿಂದಾಗಿ ಹಾನಿಗೊಳಗಾದ ಹಾಗೂ ಸೂಕ್ಷ್ಮ ಪ್ರದೇಶಗಳಿಗೆ ಜಿಲ್ಲಾಧಿಕಾರಿ, ವರಿಷ್ಠಾಧಿಕಾರಿಗಳು , ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರ್‍ಗಳು ಭೇಟಿ ನೀಡಿ ಪರಿಸ್ಥಿಯನ್ನು ಅವಲೋಕಿಸಿದ್ದಾರೆ. ಮಹಾಮಳೆಗೆ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ನದಿ ದಂಡೆಯಲ್ಲಿರುವ ಬೆಕ್ಕಿನ ಕಲ್ಮಠ ಸಮೀಪದ ಮಂಟಪ ಇರುವ ಜಾಗ ಮುಳುಗಡೆಯಾಗಿದೆ. ಈ ಪ್ರದೇಶಕ್ಕೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರ ಹೊರತಾಗಿ ಶೆಟ್ಟಿ ಪಾರ್ಕ್,ಸೀಗೆಹಟ್ಟಿ ,ಕೊಪ್ಪಲ್, ಅಯ್ಯನಕೆರೆ,ಕುಂಬಾರ ಗುಂಡಿ,ಬಿಬಿ ಸ್ಟ್ರೀಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂಜಾಗ್ರತಾ ಕ್ರಮಗಳ ಸಿದ್ಧತೆಗಳನ್ನು ನಡೆಸಿಕೊಳ್ಳಲಾಗುತ್ತಿದೆ. ಗಾಜನೂರು ಸಮೀಪದ ತುಂಗಾ ಡ್ಯಾಮ್ ಗೆ ಭೇಟಿ ನೀಡಿ ನೀರಿನ ಒಳ ಹರಿವು ಮತ್ತು ಹೊರ ಹರಿವು ಕುರಿತು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಅಲ್ಲದೇ ನೀರಿನ ಮಟ್ಟದ ಬಗ್ಗೆ ನಿರಂತರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.








