ಪುಣೆಯಲ್ಲಿರುವ ಶಿವಾಜಿಯ ಶಿವನೇರಿ ಕೋಟೆ ಚಾರಣಿಗರ ಸ್ವರ್ಗ – ಈ ಕೋಟೆಯ ವಿಶೇಷತೆಗಳೇನು ಗೊತ್ತಾ?

1 min read

ಪುಣೆಯಲ್ಲಿರುವ ಶಿವಾಜಿಯ ಶಿವನೇರಿ ಕೋಟೆ ಚಾರಣಿಗರ ಸ್ವರ್ಗ – ಈ ಕೋಟೆಯ ವಿಶೇಷತೆಗಳೇನು ಗೊತ್ತಾ?

ಛತ್ರಪತಿ ಶಿವಾಜಿ.. ವೀರ ಶೂರ ಪರಾಕ್ರಮಿ. ತನ್ನ ಅತ್ಯದ್ಭುತ ಪರಾಕ್ರಮ ದಿಂದ ಪ್ರಸಿದ್ದಿ ಪಡೆದ ಶಿವಾಜಿಗೆ ಸಂಬಂಧಿಸಿದ ಕೋಟೆಗಳಲ್ಲಿ ಪುಣೆ ಬಳಿಯ ಶಿವನೇರಿ ಕೋಟೆಯೂ ಒಂದು.

ಶಿವನೇರಿ ಕೋಟೆಯು ಪುಣೆಯ ಉತ್ತರ ಭಾಗದಲ್ಲಿ ಬರುವ ಜುನ್ನರ್ ತಾಲೂಕಿನಲ್ಲಿದೆ. ಇದು ಛತ್ರಪತಿ ಶಿವಾಜಿಯ ಜನ್ಮ ಸ್ಥಳ. ಮರಾಠಾ ಸಾಮ್ರಾಜ್ಯದಲ್ಲಿ ಬರುವ ಈ ಕೋಟೆಯನ್ನು ಶಿವಾಜಿಯ ತಂದೆ ಶಹಾಜಿ ಅವರು ನಿರ್ಮಿಸಿದ್ದರು. ಈ ಕೋಟೆಯನ್ನು ಶಹಾಜಿ ತನ್ನ ಹೆಂಡತಿ ಮತ್ತು ಮಗನ ಸುರಕ್ಷೆಗಾಗಿ ಈ ಕೋಟೆಯ ನಿರ್ಮಿಸಿದ್ದರು ಎನ್ನಲಾಗುತ್ತದೆ.

ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು.

ಇಂಥ ಮಹಾನ್ ಪರಾಕ್ರಮಿ ತನ್ನ ಬಾಲ್ಯದ ಕೆಲಕಾಲ ಕಳೆದದ್ದು ಇದೇ ಕೋಟೆಯಲ್ಲಿ.

ತನ್ನ ವಾಸ್ತುಶಿಲ್ಪ ಶೈಲಿಯಿಂದ ಜನಪ್ರಿಯ ಸ್ಥಳವಾಗಿದೆ. ಮರಾಠರ ಮಹಾನ್ ರಾಜನಾದ ಛತ್ರಪತಿ ಖ್ಯಾತಿ ಹೊಂದ ಶಿವಾಜಿಯು 1630 ರಲ್ಲಿ ಈ ಕೋಟಿಯಲ್ಲಿ ಜನಿಸಿದ್ದಲ್ಲದೇ, ಇಲ್ಲಿ ತನ್ನ ಯುದ್ಧ ತರಬೇತಿಯನ್ನೂ ಕೂಡ ಪಡೆದಿದ್ದರು.

ಮುಖ್ಯ ಕೋಟೆಯನ್ನು ಪ್ರವೇಶಿಸುವದಕ್ಕಿಂತ ಮೊದಲು ಏಳು ಮಹಾದ್ವಾರಗಳನ್ನು ದಾಟುವ ಆಲೋಚನೆಯೇ ಪ್ರವಾಸಿಗರಿಗೆ ಒಂದುರೀತಿಯ ಮುದವನ್ನುಂಟುಮಾಡುತ್ತದೆ. ಕೋಟೆಯ ಆವರಣದಲ್ಲಿ, ಸರಿಯಾಗಿ ಕೋಟೆಯ ಮಧ್ಯದಲ್ಲಿ ಬಾದಾಮಿ ತಲಾವ್ ಎಂಬ ನೀರಿನ ಸಣ್ಣ ಕೊಳವಿದೆ. ಶಿವಾಜಿಯ ತಾಯಿಯಾದ ಜೀಜಾಬಾಯಿ ಮತ್ತು ಶಿವಾಜಿಯ ವಿಗ್ರಹಗಳನ್ನು ಇಲ್ಲಿ ಕಾಣಬಹುದು.

ಚಾರಣಿಗರ ಸ್ವರ್ಗ ಈ ಸ್ಥಳ..!

ಚಾರಣಿಗರಿಗೆ ಈ ಕೋಟೆ ಹಾಟ್ ಫೇವರೇಟ್. ಅದರಲ್ಲೂ ವಾರಾಂತ್ಯದಲ್ಲಿ ಇಲ್ಲಿ ಸಾಕಷ್ಟು ಜನರು ಚಾರಣಕ್ಕಾಗಿ ಆಗಮಿಸ್ತಾರೆ. ಇಲ್ಲಿಗೆ ಬರಲು ಎರಡು ರಸ್ತೆ ಮಾರ್ಗಗಳಿವೆ. ಒಂದು ರಸ್ತೆಮಾರ್ಗ ಕೋಟೆಯ ತುದಿಯವರೆಗೂ ಕರೆದೊಯ್ಯುತ್ತದೆ. ಇನ್ನೊಂದು ಮಾರ್ಗದಲ್ಲಿ ಚಾರಣ ಮಾಡುವುದರ ಮೂಲಕ ತಲುಪಬಹುದು. ಈ ಕೋಟೆಗೆ 400 ಮೆಟ್ಟಿಲು ಹಾಗೂ ಏಳು ಭವ್ಯವಾದ ಗೇಟ್‍ಗಳಿವೆ. ಈ ಮಾರ್ಗದ ಮಧ್ಯೆ ಕಲ್ಲಿನಲ್ಲಿ ಕತ್ತರಿಸಲಾದ ಗುಹೆಗಳು ಸಿಗುತ್ತವೆ. ಇದರಲ್ಲಿ ಕೆಲವೊಂದನ್ನು ಪ್ರವೇಶಿಸಲು ಅಸಾಧ್ಯ. ಇಲ್ಲಿರುವ ಕಲ್ಲಿನ ಮೆಟ್ಟಿಲುಗಳು ಹಾಳಾಗಿರುವುದರಿಂದ ಅಲ್ಲಿಗೆ ತಲುಪಲು ಕಡಿಮೆ ಎಂದರೂ ಒಂದು ತಾಸು ಬೇಕಾಗುತ್ತದೆ.

ಆಗಸ್ಟ್ ನಿಂದ ಫೆಬ್ರವರಿ ಸಮಯದಲ್ಲಿ ಹೆಚ್ಚು ಹಸಿರುಮಯ ಪರಿಸರ ಹೊಂದಿರುತ್ತದೆ. ಇಂಥ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಚಾರಣ ಮಾಡುತ್ತಾ, ಇಲ್ಲಿಯ ಸೌಂದರ್ಯ ಸವಿಯಬಹುದು.

ಈ ಕೋಟೆಯ ವಿಶೇಷತೆಗಳೇನು ಗೊತ್ತಾ?

ಇಲ್ಲಿ ಅಂಬರ್‍ಖಾನ ಮತ್ತು ಧನ್ಯಕೋಟಿ ಎನ್ನುವ ಎರಡು ಆಹಾರ ಕಣಜ ಇರುವುದನ್ನು ಕಾಣಬಹುದು. ಆ ಕಾಲದಲ್ಲಿ ವರ್ಷಕ್ಕೆ ಬೇಕಾಗುವಷ್ಟು ಆಹಾರ ಧಾನ್ಯಗಳನ್ನು ಇದರಲ್ಲೇ ಸಂಗ್ರಹಿಸಿಡುತ್ತಿದ್ದರು. ನೆಲ ಮಾಳಿಗೆಯಲ್ಲಿ ಗಂಗಾ-ಜಮುನ ಎನ್ನುವ ಎರಡು ನೀರಿನ ಟ್ಯಾಂಕ್ ಇರುವುದನ್ನು ನೋಡಬಹುದು. ಇದು ಸರಿಸುಮಾರು 2000 ವರ್ಷಗಳಷ್ಟು ಹಳೆಯದ್ದು ಎಂದು ಹೇಳಲಾಗುತ್ತದೆ.

ಇನ್ನು ಈ ಕೋಟೆಯಲ್ಲಿ ಗಂಗಾ ಮತ್ತು ಯಮುನಾ ಎಂಬ ಎರಡು ನೀರಿನ ಬುಗ್ಗೆಗಳಿವೆ. ಇವು ವರ್ಷದುದ್ದಕ್ಕೂ ನೀರನ್ನು ಹೊಂದಿರುತ್ತವೆ.

ಶನಿವಾರ ಮತ್ತು ಭಾನುವಾರ ಸೇರಿದಂತೆ ವಾರದ ಎಲ್ಲ ದಿನಗಳಲ್ಲಿಯೂ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಈ ಕೋಟೆ ಪ್ರವಾಸಿಗರಿಗೆ ತೆರೆದಿರುತ್ತದೆ.

ಈ ಕೋಟೆಯ ಬಳಿ ಊಟ-ವಸತಿಯ ವ್ಯವಸ್ಥೆಗೆ ಅನುಕೂಲವಿಲ್ಲ. ಹೀಗಾಗಿ ಚಾರಣಿಗರು ಮತ್ತು ಪ್ರವಾಸಿಗರು ಇಲ್ಲಿಗರೆ ಭೇಟಿ ನೀಡುವ ಮುನ್ನ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd