ಬೆಂಗಳೂರು: ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಅವರ ಆಡಳಿತದ ಮೇಲೆ ಹಿಡಿತ ಸಾಧಿಸಲು ಅಥವಾ ಅವರನ್ನು ಕುರ್ಚಿಯಿಂದ ಇಳಿಸಲು ನಡೆದಿರುವ ಪ್ರಯತ್ನಗಳು ಕಾಂಗ್ರೆಸ್ ಒಳವಲಯದಲ್ಲಿ ಹೊಗೆಯಾಡುತ್ತಿವೆ. ವಿಶೇಷವಾಗಿ, ಜನವರಿ 6ರಂದು ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ಸ್ಫೋಟಕ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ.
ಇದೊಂದು ಕೇವಲ ಅತಿಯಾದ ವಿಶ್ವಾಸದ ಮಾತೇ ಅಥವಾ ಇದರ ಹಿಂದೆ ಕಾಣದ ಕೈಗಳ ಆಟವಿದೆಯೇ ಎಂಬ ಪ್ರಶ್ನೆ ಎದ್ದಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಪ್ರಸ್ತುತ ಡಿ.ಕೆ. ಶಿವಕುಮಾರ್ ಪರ ಬ್ಯಾಟ್ ಬೀಸುತ್ತಿರುವ ಬಹುತೇಕ ಶಾಸಕರು ಮುಂದಿನ ಚುನಾವಣೆಯ ದೃಷ್ಟಿಯಿಂದ ಅನಿಶ್ಚಿತತೆಯಲ್ಲಿರುವವರು. ಅವರನ್ನು ರಾಜಕೀಯ ವಲಯದಲ್ಲಿ ಒಂದು ಬಾರಿ ಚಮತ್ಕಾರ (One-time wonders) ಎಂದೇ ಬಣ್ಣಿಸಲಾಗುತ್ತಿದೆ.
ಈಗ ಸಿಎಂ ಬದಲಾವಣೆಗೆ ಧ್ವನಿ ಎತ್ತಿರುವ ಶಾಸಕರ ಪಟ್ಟಿಯನ್ನು ಗಮನಿಸಿದರೆ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬರುತ್ತದೆ. ಇವರಲ್ಲಿ ಬಹುತೇಕರು 2023ರ ಅಲೆ ಅಥವಾ ತ್ರಿಕೋನ ಸ್ಪರ್ಧೆಯ ಲಾಭ ಪಡೆದು ಗೆದ್ದವರು. 2028ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಕಣಕ್ಕಿಳಿದರೆ, ಈ ಶಾಸಕರ ಗೆಲುವು ಕಷ್ಟಸಾಧ್ಯ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಹೀಗಾಗಿಯೇ, ಮುಳುಗುತ್ತಿರುವ ಹಡಗಿನ ಪ್ರಯಾಣಿಕರಂತೆ, ಇವರು ಈಗಲೇ ತಮ್ಮ ನಿಷ್ಠೆಯನ್ನು ಬದಲಾಯಿಸಿ, ಡಿ.ಕೆ. ಶಿವಕುಮಾರ್ ಅವರ ಕೃಪಾಕಟಾಕ್ಷದಿಂದ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರು ಸಿಎಂ ಬದಲಾವಣೆಯ ಕೂಗಿನ ಮುಂಚೂಣಿಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು 10,715 ಮತಗಳಿಂದ ಸೋಲಿಸಿದ್ದು ನಿಜವವಾದರೂ, ರಾಮನಗರ ಇಂದಿಗೂ ಜೆಡಿಎಸ್ ಭದ್ರಕೋಟೆ. 2018ರಲ್ಲಿ ಇದೇ ಇಕ್ಬಾಲ್ ಹುಸೇನ್ ಅವರನ್ನು ಎಚ್.ಡಿ. ಕುಮಾರಸ್ವಾಮಿ 22,636 ಮತಗಳ ಅಂತರದಿಂದ ಸೋಲಿಸಿದ್ದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಂದಾದರೆ, ಇಕ್ಬಾಲ್ ಹಾದಿ ಸುಗಮವಾಗಿಲ್ಲ ಎಂಬುದು ಅವರಿಗೂ ತಿಳಿದಿದೆ. ಹೀಗಾಗಿ ಹೈಕಮಾಂಡ್ ನೋಟಿಸ್‌ಗೂ ಕ್ಯಾರೇ ಎನ್ನದೆ ಬಂಡಾಯದ ಬಾವುಟ ಹಾರಿಸುತ್ತಿದ್ದಾರೆ.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ತಾಯಿ ಮೋಟಮ್ಮ ಅವರ ರಾಜಕೀಯ ನೆರಳಿನಲ್ಲಿ ಬೆಳೆದ ನಯನಾ, ಕಳೆದ ಬಾರಿ ಗೆದ್ದಿದ್ದು ಅದೃಷ್ಟದ ಬಲದಿಂದ ಎನ್ನಲಾಗುತ್ತಿದೆ. ಜೆಡಿಎಸ್ ಸೇರಿದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು 26,000 ಮತಗಳನ್ನು ಕಸಿದಿದ್ದರಿಂದ ಮತ್ತು ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಅಲ್ಪ ಅಂತರದಲ್ಲಿ ಸೋತಿದ್ದರಿಂದ ನಯನಾ ಗೆಲುವು ಸಾಧ್ಯವಾಯಿತು. ಮುಂದಿನ ಬಾರಿ ಈ ಸಮೀಕರಣ ಬದಲಾದರೆ ಫಲಿತಾಂಶ ಉಲ್ಟಾ ಆಗುವ ಸಾಧ್ಯತೆಯೇ ಹೆಚ್ಚು. ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಇನ್ನು ಚನ್ನಗಿರಿಯ ಬಸವರಾಜ ಶಿವಗಂಗಾ ಅವರ ಗೆಲುವನ್ನು ಕೂಡ ಆಕಸ್ಮಿಕ ಎಂದೇ ಪರಿಗಣಿಸಲಾಗುತ್ತಿದ್ದು, ಇವರೂ ಈಗ ಡಿಕೆಶಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದಾರೆ.
ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್ ಮತ್ತು ಡಿಕೆಶಿ ನಡುವಿನ ಸಂಬಂಧ ಜಗಜ್ಜಾಹೀರು. ಇಬ್ಬರೂ ಸಹೋದರಿಯರನ್ನು ಮದುವೆಯಾಗಿದ್ದು, ರಂಗನಾಥ್ ಬೆಂಬಲ ಸಹಜವಾಗಿಯೇ ಡಿಕೆಶಿ ಪರವಾಗಿದೆ. ಮಾಗಡಿ ಬಾಲಕೃಷ್ಣ ಕೂಡ ಈ ಗುಂಪಿನಲ್ಲಿದ್ದಾರೆ. ಆದರೆ, ಸಿದ್ದರಾಮಯ್ಯ ಅವರಂತಹ ಪ್ರಬಲ ಜನನಾಯಕರನ್ನು ಕೆಳಗಿಳಿಸಲು ಕೇವಲ ಈ ಬೆರಳೆಣಿಕೆಯ ಶಾಸಕರ ಬಲ ಸಾಲದು ಎಂಬುದು ವಾಸ್ತವ.
ದೆಹಲಿ ನಾಯಕರ ಗುಪ್ತ ಬೆಂಬಲವಿದೆಯೇ?
ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಇಕ್ಬಾಲ್ ಹುಸೇನ್ ಅಂತಹ ಶಾಸಕರು ಹೈಕಮಾಂಡ್ ನೋಟಿಸ್‌ಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಆದರೂ ಶಿಸ್ತು ಸಮಿತಿ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೆಹಲಿಯ ಕೆಲ ಪ್ರಭಾವಿ ನಾಯಕರು ಈ ಬಂಡಾಯದ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆಯೇ ಎಂಬ ಗುಸುಗುಸು ಎಐಸಿಸಿ ಅಂಗಳದಲ್ಲಿ ಕೇಳಿಬರುತ್ತಿದೆ. ಬದಲಾವಣೆಗೆ ಸಿದ್ಧರಾಗಿ ಎಂಬ ಡಿಕೆಶಿ ಅವರ ಮಾರ್ಮಿಕ ಹೇಳಿಕೆಗಳು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ.
ಜನವರಿ 6ರಂದು ಅಧಿಕಾರ ಬದಲಾವಣೆ ಆಗಲಿದೆ ಎಂಬುದು ಸದ್ಯಕ್ಕೆ ಕೇವಲ ರಾಜಕೀಯ ಗಿಮಿಕ್ ಆಗಿ ಕಾಣುತ್ತಿದೆ. ಸಿದ್ದರಾಮಯ್ಯ ಅವರ ಕುರ್ಚಿ ಸದ್ಯಕ್ಕೆ ಭದ್ರವಾಗಿಯೇ ಇದೆ. ಆದರೆ, ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹೆದರಿರುವ ಕೆಲವು ಶಾಸಕರು ನಡೆಸುತ್ತಿರುವ ಈ ಕೂಗು, ಕಾಂಗ್ರೆಸ್ ಸರ್ಕಾರದಲ್ಲಿ ಅಸ್ಥಿರತೆಯ ಅಲೆಗಳನ್ನು ಎಬ್ಬಿಸುತ್ತಿರುವುದಂತೂ ಸತ್ಯ. ಇದು ಕ್ರಾಂತಿಯೋ ಅಥವಾ ವಿಫಲ ಬಂಡಾಯವೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.








