ಗಲಭೆ ಬಳಿಕ ಶಾಂತವಾದ ಶಿವಮೊಗ್ಗ – Saaksha Tv
ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷಾ ಕೊಲೆ ಸಂಭಂದ ಹೊತ್ತಿ ಉರಿದ ಜಿಲ್ಲೆ ಈಗ ಶಾಂತವಾಗಿದೆ.
ಕಾದ ಕಾವಲಿಯಂತಾಗಿದ್ದ ಶಿವಮೊಗ್ಗ ನಗರದ ಬಹುತೇಕ ಭಾಗ ಮಂಗಳವಾರ ಶಾಂತವಾಗಿತ್ತು. ತಲವಾರು, ಕತ್ತಿ, ಮಚ್ಚು ಝಳಪಿಸಿದ್ದ ಜಾಗಗಳು ತಣ್ಣಗಾಗಿದ್ದವು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರನ್ನು ನಿಯೋಜಿಸಿದ್ದರಿಂದ ಯಾರೊಬ್ಬರೂ ರಸ್ತೆಯ ಮೇಲೆ ಓಡಾಡುವುದು ಕಾಣಲಿಲ್ಲ. ಅನಗತ್ಯವಾಗಿ ಓಡಾಡುವವರನ್ನು ಹಿಡಿದು ಪೊಲೀಸರು ವಿಚಾರಣೆ ನಡೆಸಿದರು. ಅಮೀರ್ ಅಹ್ಮದ್ ವೃತ್ತದಿಂದ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಬಿ. ಎಚ್. ರಸ್ತೆಯಲ್ಲೂ ಜನ ಸಂಚಾರ ಇರಲಿಲ್ಲ.
ಐಜಿಪಿ ತ್ಯಾಗರಾಜನ್, ಎಡಿಜಿಪಿಗಳಾದ ಮುರುಗನ್, ಪ್ರತಾಪ್ ರೆಡ್ಡಿ, ಎಸ್‌ಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಅವರು ನಗರ ಪ್ರದೇಶದಲ್ಲಿ ಸಂಚರಿಸುವ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿದರು.
ಉಭಯ ಕೋಮುಗಳ ನಡುವೆ ಹೊತ್ತಿಕೊಂಡಿರುವ ಬೆಂಕಿಯಿಂದಾಗಿ ಶಿವಮೊಗ್ಗ ನಗರ ಸ್ತಬ್ದವಾಗಿದೆ. ಇದರಿಂದ ದುಡಿದು ತಿನ್ನುವ ವರ್ಗ ಬೀದಿಗೆ ಬಿದ್ದಂತಾಗಿದೆ. ಜೊತೆಗೆ, ಮೆರವಣಿಗೆ ವೇಳೆ ತಳ್ಳುಗಾಡಿಗಳನ್ನು ಧ್ವಂಸಗೊಳಿಸಿದ್ದು, ಹಣ್ಣಿನ ಅಂಗಡಿಗಳನ್ನು ಹಾಳು ಮಾಡಿ ಹಣ್ಣುಗಳನ್ನು ಬೀದಿಗೆ ಹಾಕಿರುವುದರಿಂದ ವ್ಯಾಪಾರಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಯಾವುದೇ ತಪ್ಪುಗಳಿಲ್ಲದಿದ್ದರೂ ಬಡ ವ್ಯಾಪಾರಿಗಳು ಕಷ್ಟ ಅನುಭವಿಸುತ್ತಿದ್ದಾರೆ. ಕೋವಿಡ್‌ನಿಂದಾಗಿ ಈಗಾಗಲೇ ಸಾಕಷ್ಟು ತೊಂದರೆಯಲ್ಲಿರುವವರಿಗೆ ಗಲಭೆ ಮತ್ತು ಕರ್ಫ್ಯೂ ಗಾಯದ ಮೇಲೆ ಬರೆ ಎಳೆದಿದೆ. ಆಟೋ ಚಾಲಕರು, ಖಾಸಗಿ ಬಸ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗಿದೆ.









