Shivamogga : ಹರ್ಷನ ಕುಟುಂಬಕ್ಕೆ 7.17 ಲಕ್ಷ ಆರ್ಥಿಕ ನೆರವು ನೀಡಿದ ರೇಣುಕಾಚಾರ್ಯ
ಭಜರಂಗ ದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಸಿ .ಎಂ ರಾಜ್ಯದ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು 7.17 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ. ಈ ಮೂಲಕ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ರೇಣುಕಾಚಾರ್ಯರು ನಡೆದುಕೊಂಡಿದ್ದಾರೆ.
ಹರ್ಷನ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.. ಹರ್ಷನ ಸಾವು ವ್ಯರ್ಥವಾಗಲು ಸರ್ಕಾರ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ಗುರುವಾರ ಶಿವಮೊಗ್ಗದಲ್ಲಿರುವ ಮೃತ ಹರ್ಷನ ತಂದೆ, ತಾಯಿ, ಹಾಗೂ ಸಹೋದರಿಯರನ್ನು ಮನೆಯಲ್ಲಿ ಖುದ್ದು ಭೇಟಿಯಾಗಿ ಪರಿಹಾರ ಮೊತ್ತದ ಚಕ್ ಅನ್ನು ಹಸ್ತಾಂತರ ಮಾಡಿದ್ದಾರೆ.
ರೇಣುಕಾಚಾರ್ಯ ಅವರು, ವೈಯಕ್ತಿಕವಾಗಿ 5 ಲಕ್ಷ, ಹೊನ್ನಾಳಿ- ನ್ಯಾಮತಿ ಕ್ಷೇತ್ರದ ಬಿಜೆಪಿ ಮಂಡಲ ವತಿಯಿಂದ 1.17 ಲಕ್ಷ , ಹಾಗೂ ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ತಲಾ 1 ಲಕ್ಷ ಮೊತ್ತದ ಚಕ್ ಗಳನ್ನು ಕುಟುಂಬದವರಿಗೆ ನೀಡಿ ಸಾಂತ್ವನ ಹೇಳಿದರು.
ಹರ್ಷ ಈ ದೇಶ ಮತ್ತು ಸಮಾಜಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ್ದಾನೆ. ಇಂತಹ ಸಂಕಷ್ಟದ ಸಮಯದಲ್ಲಿ ಆತನ ಕುಟುಂಬದ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ.ನಾವು ಸಾವಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಂಬನಿ ಮಿಡಿದರು.
ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದು ಕೊಂಡಿರುವವರಿಗೆ ಇದೊಂದು ಅಲ್ಪಕಾಣಿಕೆ. ಅವರ ಕುಟುಂಬದವರ ನೆರವಿಗೆ ನಿಲ್ಲುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಹಿಂದೂ ಸಾಮ್ರಾಜ್ಯದ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಹರ್ಷ ಸಾವನ್ನು ನಮ್ಮ ಸರ್ಕಾರ ವ್ಯರ್ಥವಾಗಲು ಬಿಡುವುದಿಲ್ಲ. ಕುಟುಂಬದವರ ಕೋರಿಕೆಯಂತೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ ಎಂದಿದ್ದಾರೆ.