ಶಿವಮೊಗ್ಗ: ಮುಂದಿನ ತಿಂಗಳು ಆಪರೇಷನ್ ಇದೆ. ಹೀಗಾಗಿ ಯುಎಸ್ಎಗೆ ಹೋಗುತ್ತಿದ್ದೇನೆ ಎಂದು ನಟ ಶಿವರಾಜ್ ಕುಮಾರ್ (Dr Shiva Rajkumar) ಹೇಳಿದ್ದಾರೆ.
ಭೈರತಿ ರಣಗಲ್ ಸಿನಿಮಾದ ಯಶಸ್ಸಿನ ನಂತರ ನಟ ಶಿವರಾಜ್ ಕುಮಾರ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ್ದಾರೆ. ನಗರದಲ್ಲಿನ ಗೋಪಿ ವೃತ್ತದಲ್ಲಿರುವ ಮಲ್ಲಿಕಾರ್ಜುನ್ ಚಿತ್ರಮಂದಿರಕ್ಕೆ ಆಗಮಿಸಿದ ಶಿವಣ್ಣ ಅಭಿಮಾನಿಗಳ ಜೊತೆಗೆ ಭೈರತಿ ರಣಗಲ್ ಯಶಸ್ಸು ಹಂಚಿಕೊಂಡಿದ್ದಾರೆ.
ಈ ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಭೈರತಿ ರಣಗಲ್ ಸ್ಟೈಲ್ ನಲ್ಲೇ ಕ್ಯಾಸ್ಟ್ಯೂಮ್ ಹಾಕಿಕೊಂಡು ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅಭಿಮಾನಿಗಳನ್ನು ಭೇಟಿ ಮಾಡಿ ಮಾತನಾಡಿದ ಶಿವರಾಜ್ ಕುಮಾರ್, ಎಲ್ಲಾ ಕಡೆಗಳಲ್ಲಿ ಬೈರತಿ ರಣಗಲ್ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಉತ್ತಮ ಕಲೆಕ್ಷನ್ ಆಗುತ್ತಿದೆ. ಈಗ 45 ಸಿನಿಮಾ ರೆಡಿಯಾಗುತ್ತಿದೆ. ತೆಲುಗಿನಲ್ಲಿ ರಾಮ್ ಚರಣ್ ಜೊತೆ ಒಂದು ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.








