ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ನಟ. ವರ್ಷದಲ್ಲಿ ಮೂರರಿಂದ ನಾಲ್ಕು ಸಿನಿಮಾಗಳನ್ನು ಮಾಡುತ್ತಿದ್ದ ಶಿವಣ್ಣ ಸದ್ಯ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ಮಧ್ಯೆಯೂ ಕೂಡ ‘ಜೋಗಿ’ಯನ್ನು ಹುಡುಕಿಕೊಂಡು ಸಿನಿಮಾಗಳ ಮೇಲೆ ಸಿನಿಮಾಗಳು ಬರುತ್ತಲೇ ಇವೆ.
ಹೌದು, ಕೊರೊನಾ ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಶಿವಣ್ಣ ಉಳಿದುಕೊಂಡಿದ್ದರೂ ಹಲವಾರು ಕಥೆಗಳನ್ನು ಕೇಳಿದ್ದು, ಕೆಲವಕ್ಕೆ ಸಮ್ಮತಿಯನ್ನೂ ಸೂಚಿಸಿದ್ದಾರೆ. ಅದರಲ್ಲಿ ಸಾಮಾಜಿಕ ಸಮಸ್ಯೆಯನ್ನೇ ಕಥಾಹಂದರ ಹೊಂದಿರುವ ಸಿನಿಮಾ ಒಂದಕ್ಕೆ ಶಿವರಾಜ್‌ಕುಮಾರ್ ಓಕೆ ಎಂದಿದ್ದಾರಂತೆ. ಈ ಸಿನಿಮಾಗೆ ಇಂದ್ರಸೇನಾ ಎಂದು ಟೈಟಲ್ ಫಿಕ್ಸ್ ಆಗಿದ್ದು, ಈ ಸಿನಿಮಾವನ್ನು ಮುರಳಿ ಮೋಹನ್ ನಿರ್ದೇಶಿಸುತ್ತಿದ್ದಾರೆ. ಇವರ ಈ ಮುಂಚೆ ಸಂತ, ಮಲ್ಲಿಕಾರ್ಜುನ ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಮುರಳಿ ಮೋಹನ್ ಸೂಪರ್ ಸ್ಟಾರ್ ಉಪೇಂದ್ರ ಕ್ಯಾಂಪ್ ನಲ್ಲಿ ಗುರುತಿಸಿಕೊಂಡಿದ್ದು, ಬ್ರಿಟೀಷರಿಂದ ಗಳಿಸಿದ ಸ್ವಾತಂತ್ರ‍್ಯವನ್ನು ಈಗ ನಮ್ಮವರೇ ಕಿತ್ತುಕೊಳ್ಳುತ್ತಿದ್ದಾರೆ. ಅದರಿಂದ ರಕ್ಷಿಸಲು ಯಾರು ಬರಬೇಕು ಎಂಬ ಒನ್ ಲೈನರ್ ಇಟ್ಟುಕೊಂಡು ಕಥೆ ಹೆಣೆದಿದ್ದಾರೆ.
ಇನ್ನು ಇಂದ್ರಸೇನಾ ಸಿನಿಮಾ ಕಥೆ ಬಿಟ್ಟು ಶಿವರಾಜ್ ಕುಮಾರ್ ಅವರು ಈಗಾಗಲೇ ಆರ್‌ಡಿಎಕ್ಸ್ ಕಥೆ ಕೇಳಿ ಮುಗಿಸಿದ್ದಾರೆ. ತೆಲುಗಿನ ರಾಮ್ ಧುಲಿಪುಡಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಜೊತೆ ಕರಗವನ್ನು ಮುನ್ನೆಲೆಯಲ್ಲಿಟ್ಟು ರಥಾವರ ಸಿನಿಮಾ ನಿರ್ದೇಶಕ ಕಥೆಯೊಂದು ಹೆಣೆದಿದ್ದು ಅದರಲ್ಲಿಯೂ ನಟಿಸಲಿದ್ದಾರೆ ಕರುನಾಡ ಚಕ್ರವರ್ತಿ.








