ಪತ್ನಿ ಮತ್ತು ಮಗನೊಡನೆ ಸಮಯ ಕಳೆಯಲು ಶೋಯೆಬ್ ಮಲಿಕ್ ಗೆ ಪಿಸಿಬಿ ಅನುಮತಿ
ಕರಾಚಿ, ಜೂನ್ 22: ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಗೆ ಕೊರೊನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಪತ್ನಿ ಸಾನಿಯಾ ಮಿರ್ಜಾ ಹಾಗೂ ಮಗುವನ್ನು ನೋಡಲು ಸಾಧ್ಯವಾಗಿರಲಿಲ್ಲ. ಇದೀಗ ತನ್ನ ಕುಟುಂಬದೊಂದಿಗೆ ಸಮಯ ಕಳೆಯಬೇಕೆಂಬ ಶೋಯೆಬ್ ಮಲಿಕ್ ಮನವಿಯನ್ನು ಸ್ವೀಕರಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಂಗ್ಲೆಂಡ್ ಗೆ ಶೋಯೆಬ್ ತಡವಾಗಿ ಬರಲು ಅನುಮತಿ ಕಲ್ಪಿಸಿದೆ.
ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಪಾಕ್ ನ 29 ಆಟಗಾರರ ತಂಡದಲ್ಲಿ ಶೋಯೆಬ್ ಸ್ಥಾನ ಪಡೆದಿದ್ದು, ಇಂಗ್ಲೆಂಡ್ ಸರಣಿಯ ತಂಡಕ್ಕೆ ಅವರು ತಡವಾಗಿ ಬಂದು ಸೇರ್ಪಡೆಗೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಇಂಗ್ಲೆಂಡ್ ಗೆ ಜೂನ್ 28ರಂದು ಪಾಕ್ ತಂಡ ಚಾರ್ಟೆರ್ಡ್ ವಿಮಾನದಲ್ಲಿ ತೆರಳಲಿದೆ. ಆದರೆ ಶೋಯೆಬ್ ಮಲಿಕ್ ಈ ಸಮಯದಲ್ಲಿ ತಮ್ಮ ಪತ್ನಿ ಸಾನಿಯಾ ಹಾಗೂ ಮಗುವನ್ನು ನೋಡಲು ತೆರಳಲಿದ್ದು, ತಡವಾಗಿ ಬಂದು ತಂಡವನ್ನು ಸೇರಲಿದ್ದಾರೆ
ಲಾಕ್ ಡೌನ್ ನಿಂದಾಗಿ ಮಲಿಕ್ ತನ್ನ ಪತ್ನಿ ಸಾನಿಯಾ ಮಿರ್ಜಾ ಮತ್ತು ಮಗನನ್ನು ಐದು ತಿಂಗಳಿನಿಂದ ಭೇಟಿಯಾಗಿಲ್ಲ ಎಂದು ವರದಿಯಾಗಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲು ಸ್ವಲ್ಪ ಸಮಯವನ್ನು ಕುಟುಂಬದೊಂದಿಗೆ ಕಳೆಯಲು ಅನುಮತಿ ನೀಡುವಂತೆ ಪಿಸಿಬಿಗೆ ಶೋಯೆಬ್ ಮಲಿಕ್ ಮನವಿ ಮಾಡಿದ್ದರು.
ಕೊರೊನಾ ಸೋಂಕಿನ ಕಾರಣದಿಂದಾಗಿ ಅಂತಾರಾಷ್ಟ್ರೀಯ ಪ್ರಯಾಣ ನಿಷೇಧವಿದ್ದ ಹಿನ್ನಲೆಯಲ್ಲಿ ಮಲಿಕ್ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿದ್ದರೆ, ಅವರ ಪತ್ನಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಒಂದು ವರ್ಷದ ಮಗ ಭಾರತದಲ್ಲಿದ್ದಾರೆ.