ಕೆಸರು ಗದ್ದೆಗಿಳಿದು ಭತ್ತದ ನಾಟಿ ಮಾಡಿದ ಮಣ್ಣಿನ ಮಗಳು ಶೋಭಾ ಕರಂದ್ಲಾಜೆ..!
ಗ್ರಾಮೀಣ ಪ್ರದೇಶ.. ತೀರಾ ಕುಗ್ರಾಮದಿಂದ ಬೆಳೆದು ಬಂದಿರುವ ಶೋಭಾ ಕರಂದ್ಲಾಜೆ ಈಗ ಕೇಂದ್ರ ಕೃಷಿ ಸಚಿವೆ. ವಿಧಾನ ಪರಿಷತ್ ಸದಸ್ಯೆಯಾಗಿ, ಶಾಸಕಿಯಾಗಿ, ರಾಜ್ಯ ಸಚಿವೆಯಾಗಿ, ಸಂಸದೆಯಾಗಿ ಸದ್ಯ ಕೇಂದ್ರ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಹೌದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಭತ್ತದ ಗದ್ದೆಯಲ್ಲಿ ನಾಟಿ ಮಾಡಿ ಗಮನ ಸೆಳೆದಿದ್ದಾರೆ. ಬಿಜೆಪಿಯ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಂಡ್ಯ ಪ್ರವಾಸದಲ್ಲಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿದ್ದಲ್ಲದೇ ಪರಿಶೀಲನೆ ಕೂಡ ನಡೆಸಿದ್ರು. ಬಳಿಕ ಹೊನಗನಹಳ್ಳಿಯ ಗದ್ದೆಯಲ್ಲಿ ಮಹಿಳೆಯರ ಜೊತೆ ಭತ್ತ ನಾಟಿ ಮಾಡುವ ಮೂಲಕ ಗಮನ ಸೆಳೆದ್ರು. ಹಾಗಂತ ಇದರಲ್ಲಿ ಅಚ್ಚರಿ ಏನು ಇಲ್ಲ. ಯಾಕಂದ್ರೆ ರೈತನ ಮಗಳಾಗಿರುವ ಶೋಭಾ ಕರಂದ್ಲಾಜೆಯವರಿಗೆ ಭತ್ತದ ನಾಟಿ ಮಾಡುವುದು ಗೊತ್ತು. ಇದೇನೂ ಶೋಭಾ ಅವರಿಗೆ ಹೊಸದೆನಲ್ಲ.
ಇದೇ ವೇಳೆ ಸಚಿವ ನಾರಾಯಣ ಗೌಡ ಅವರು ಭತ್ತದ ನಾಟಿ ಯಂತ್ರಕ್ಕೆ ಚಾಲನೆ ನೀಡಿದ್ರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು, ರೈತನ ಮಗಳಿಗೆ, ರೈತ ಮಹಿಳೆಗೆ ದೇಶದ ಕೃಷಿ ಸಚಿವೆಯಾಗುವ ಅವಕಾಶ ಸಿಕ್ಕಿದೆ. ಅವಕಾಶ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಗಳು ಎಂದು ಅವರು ಹೇಳಿದ್ರು.
ರೈತರು ಆಧುನಿಕ ಕೃಷಿ ಪದ್ದತಿಗಳನ್ನು ಬಳಸಿಕೊಳ್ಳಬೇಕು. ರೈತರ ಆದಾಯವನ್ನು ಇಮ್ಮಡಿಗೊಳಿಸುವುದು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದೆ. ಆತ್ಮ ನಿರ್ಭರ ಯೋಜನೆಯಲ್ಲಿ ಸಾವಯವ ಬೆಲ್ಲದ ರಫ್ತು ಹೆಚ್ಚು ಮಾಡಬೇಕು. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಗಳನ್ನು ನೀಡಲಾಗುವುದು ಎಂದು ಶೋಭಾ ಕರಂದ್ಲಾಜೆ ಹೇಳಿದ್ರು.
ಇನ್ನು ರೈತರು ದೇಶದ ಬೆನ್ನೆಲುಬು. ಕೊವಿಡ್ ಸಂಕಷ್ಟ ಕಾಲದಲ್ಲೂ ದೇಶದಲ್ಲಿ ಆಹಾರದ ಕೊರತೆಯಾಗಿಲ್ಲ. ಇದರ ಶ್ರೇಯ ನಮ್ಮ ರೈತರಿಗೆ ಸಲ್ಲಬೇಕು ಎಂದು ಅವರು ಹೇಳಿದ್ರು.