ರಾಯಚೂರು: ಇಲ್ಲಿಯವರೆಗೆ ಮಠ- ಮಂದಿರ, ರೈತರಿಗೆ ತಟ್ಟಿದ ವಕ್ಫ್ ಆತಂಕ ಈಗ ಶಾಸಕರಿಗೂ ತಟ್ಟಿದೆ.
ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹಾಗೂ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಅವರಿಗೆ ಸಂಬಂಧಿಸಿದ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂಬುವುದಾಗಿ ನಮೂದಾಗಿದೆ.
ಮಾನಪ್ಪ ವಜ್ಜಲ್ ಪುತ್ರ ಆಂಜನೇಯ ವಜ್ಜಲ್ ಗೆ ಸೇರಿದ ಲಿಂಗಸುಗೂರಿನ ಮುದಗಲ್ ಸೀಮೆಯ ಸ.ನಂ 242/7 ರ 1 ಎಕರೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿದೆ. 2016-17 ರಲ್ಲಿ ಖರೀದಿಸಿದ್ದ ಜಮೀನಿನಲ್ಲಿ ವಕ್ಫ್ ಹೆಸರು ನಮೂದಾಗಿದೆ. ಇದನ್ನು ಸರಿಪಡಿಸುವಂತೆ ಶಾಸಕ ವಜ್ಜಲ್ ಅವರು ತಹಸೀಲ್ದಾರ್ ಹಾಗೂ ಲಿಂಗಸುಗೂರು ಎಸಿಗೆ ಹೇಳಿದ್ದಾರೆ.
ಶರಣಗೌಡ ಬಯ್ಯಾಪೂರ ಹೆಸರಿನ ಜಮೀನನ ಪಹಣಿಯಲ್ಲೂ ವಕ್ಫ್ ಹೆಸರು ಕಾಣಿಸಿಕೊಂಡಿದೆ. ಸರ್ವೆ ನಂ. 242/4 ರ ಒಂದು ಎಕರೆ ಜಮೀನು 2007-08 ರಲ್ಲಿ ಖರೀದಿಸಿದ್ದ ಬಯ್ಯಾಪೂರ ಈಗಾಗಲೇ ಜಮೀನು ಎನ್ಎ ಮಾಡಿಸಿದ್ದಾರೆ. ಅದೇ ಸ.ನಂ. ನಲ್ಲಿರುವ ಲಿಂಗಸುಗೂರಿನ ಅಂಕಲಿಮಠದ ಶ್ರೀಗಳಿಗೂ ಬಿಸಿ ತಟ್ಟಿದ್ದು, ಸ.ನಂ 242/8 ರ ಫಕೀರಸ್ವಾಮಿಗೆ ಸೇರಿದ 19 ಗುಂಟೆ ಜಮೀನಿನಲ್ಲೂ ವಕ್ಫ್ ಹೆಸರು ಕಾಣಿಸಿಕೊಂಡಿದೆ. ಇದರಿಂದಾಗಿ ರೈತರಂತೂ ವಕ್ಫ್ ನಿಂದಾಗಿ ರೋಸಿ ಹೋಗಿದ್ದಾರೆ. ಈ ಕುರಿತು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.