ಮುಂಬೈ : ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಒಂದು ಭಾಗವಾಗಿಬಿಟ್ಟಿದೆ. ಈ ಪೆಡಂಭೂತದ ವಿರುದ್ಧ ಸಿಡಿದು ಸಾಕಷ್ಟು ನಟಿಯರು ಈಗಾಗಲೇ ಮೀಟೂ ಅಭಿಯಾನದಡಿ ತಮಗಾದ ಕಹಿ ಅನುಭವಗಳನ್ನು ಹೊರಗೆಡವಿದ್ದಾರೆ. ಇದೀಗ ಬಹುಭಾಷ ನಟಿ ಅದಾ ಶರ್ಮಾ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ತುಟಿಬಿಚ್ಚಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಅದಾ ಶರ್ಮಾ, ಕಾಸ್ಟಿಂಗ್ ಕೌಚ್ ಎಂಬುದು ಕೇವಲ ಉತ್ತರ-ದಕ್ಷಿಣ ಭಾರತ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಈ ಬಗ್ಗೆ ಜಗತ್ತಿನಾದ್ಯಂತ ಮಾತನಾಡುತ್ತಾರೆ. ಹೀಗಾಗಿ ಇದು ಜಾಗತಿಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯಾವಾಗಲೂ ಒಂದು ಆಯ್ಕೆ ಇದ್ದೇ ಇರುತ್ತದೆ. ಮಂಚದ ಮೇಲೆ ಬಯಸಿದರೆ ಕುಳಿತುಕೊಳ್ಳಬಹುದು, ಮಲಗಿಕೊಳ್ಳಬಹುದು, ನಿಲ್ಲಲುಬಹುದು ಹಾಗೂ ಏನನ್ನು ಮಾಡಲು ಬಯಸಿದರೆ ಸುಮ್ಮನ್ನೇ ನೆಲದ ಮೇಲೆ ಕುಳಿತುಕೊಳ್ಳಬಹುದು ಎಂದು ಕಾಸ್ಟಿಂಗ್ ಕೌಚ್ ಕುರಿತು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಅದಾ ಅವರು ಕೊನೆಯದಾಗಿ ಬೈಪಾಸ್ ರೋಡ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಮ್ಯಾನ್ ಟು ಮ್ಯಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.