ಹಾವೇರಿ : ಬೈಕ್ ನಲ್ಲಿ ಬಂದಿದ್ದ ಮುಸುಕುಧಾರಿಗಳು ಮಹಿಳೆ ಮೇಲೆ ಗುಂಡುಹಾರಿಸಿರುವ ಭಯಾನಕ ಘಟನೆ ಹಾವೇರಿಯ ಶಿಗ್ಗಾಂವಿಯ ಹುಲಗೂರು ಗ್ರಾಮದಲ್ಲಿ ನಡೆದಿದೆ.. ಶಿಗ್ಗಾಂವಿಯ ಶೂಟೌಟ್ ಪ್ರಕರಣ ಮಾಸುವ ಮತ್ತೊಂದು ಫೈರಿಂಗ್ ಪ್ರಕರಣ ಸ್ಥಳೀಯರನ್ನ ಬೆಚ್ಚಿ ಬೀಳಿಸಿದೆ..
ಸಲ್ಮಾ ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಬೈಕ್ ಮೇಲೆ ಬಂದಿದ್ದ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಅದೇ ವೇಳೆಯಲ್ಲಿ ಕರೆಂಟ್ ಹೋಗಿದ್ದು, ಕತ್ತಲಾಗಿದ್ದರಿಂದ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡ ಮಹಿಳೆ ಮನೆಯೊಳಗೆ ಓಡಿ ಹೋಗಿದ್ದಾರೆ. ಇದರಿಂದಾಗಿ ಮನೆಯ ಗೋಡೆಗೆ ಒಳಗೆ ಗುಂಡು ತಾಗಿದೆ.
ಗುಂಡಿನ ದಾಳಿಯಲ್ಲಿ ಮಹಿಳೆ ಹಾಗೂ ಮಹಿಳೆಯ ಮನೆಯವರಾದ 14 ಜನರು ಅದೃಷ್ಟವಶಾತ್ ಪಾರಾಗಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಮನೆ ಬಳಿ ಜಮಾಯಿಸಿದ್ದಾರೆ. ಅಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಲ್ಮಾಳಿಗೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಮೂವರು ಮಕ್ಕಳಿದ್ದಾರೆ. ಪತಿ ಜಗಳ ಮಾಡಿಕೊಂಡಿದ್ದರಿಂದ ಸಲ್ಮಾ ಎರಡು ವರ್ಷಗಳಿಂದ ತವರುಮನೆ ಹುಲಗೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ಆದರೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮುಸುಕುಧಾರಿಗಳು ಬಂದೂಕಿನಿಂದ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಸಲ್ಮಾ, ಆಕೆಯ ಮಕ್ಕಳು, ತಂದೆ ಮತ್ತು ಅಣ್ಣತಮ್ಮಂದಿರು ಸೇರಿದಂತೆ ಒಟ್ಟು ಹದಿನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ದುಷ್ಕರ್ಮಿಗಳ ಬಂದೂಕಿನಿಂದ ಒಂದು ಸುತ್ತು ಗುಂಡು ಹಾರಿದೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ವಿಜಯ್ಕುಮಾರ್ ಸೇರಿದಂತೆ ಶಿಗ್ಗಾಂವಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ..








