ಬೆಂಗಳೂರು: ಆಡಳಿತಾವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಮೂರು ವಾರದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಹೈಕೋರ್ಟ್ ಸೂಚನೆ ನೀಡಿರುವ ಬೆನ್ನಲ್ಲೆ ಚುನಾವಣೆ ನಡೆಸಲು ಅಗತ್ಯವಾದ ಸಿದ್ಧತೆಗಳಿಗೆ ರಾಜ್ಯ ಚುನಾವಣಾ ಆಯೋಗ ತೊಡಗಿದೆ.
ಹೈಕೋರ್ಟ್ ನಿರ್ದೇಶನ ನೀಡಿರುವುದರಿಂದ ಕೋವಿಡ್ ಸವಾಲಿನ ನಡುವೆಯೂ 5,800 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಹೀಗಾಗಿ ನವೆಂಬರ್ ಕೊನೆಯ ವಾರ ಇಲ್ಲವೇ ಡಿಸೆಂಬರ್ ಮೊದಲನೇ ವಾರದಲ್ಲಿ ಚುನಾವಣೆಯ ದಿನಾಂಕ ಘೋಷಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಿ.ಬಸವರಾಜು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು,ಚುನಾವಣೆ ನಡೆಸಲು ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತಂತೆ ಮಂಗಳವಾರ(ನಾಳೆ) ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿ ಗಳು, ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ವಿಡಿಯೊ ಸಂವಾದ ನಡೆಸಲಾಗುವುದು. ಬೆಂಗಳೂರು ಮತ್ತು ಕಲಬುರ್ಗಿ ವಿಭಾಗ ಹಾಗೂ ಮಧ್ಯಾಹ್ನದ ಬಳಿಕ ಬೆಳಗಾವಿ ಮತ್ತು ಮೈಸೂರು ವಿಭಾಗದ ಅಧಿಕಾರಿಗಳ ಜೊತೆ ಸಿದ್ಧತೆಯ ಬಗ್ಗೆ ಚರ್ಚಿಸಲಾಗುವುದು ಎಂದರು.
ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ ನಿರ್ದೇಶನದಿಂದ ನಮಗೆ ಬಲ ಬಂದAತಾಗಿದೆ. ಹೀಗಾಗಿ ನಾವು ಆ ನಿಟ್ಟಿನಲ್ಲಿ ಮುಂದುವರಿಯುತ್ತೇವೆ. ರಾಜ್ಯದ ಕೆಲವು ಗ್ರಾಮ ಪಂಚಾಯಿತಿಗಳಿಗೆ ಈ ಹಿಂದೆ ವಿಳಂಬವಾಗಿ ಚುನಾವಣೆ ನಡೆದಿತ್ತು. ಕೆಲವು ಪಂಚಾಯಿತಿಗಳ ವ್ಯಾಜ್ಯ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ. ಆ ಪಂಚಾಯಿತಿಗಳನ್ನು ಹೊರತುಪಡಿಸಿ ಉಳಿದವುಗಳಿಗೆ ಈಗ ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯಕ್ತರು ವಿವರಿಸಿದರು.
ಚುನಾವಣೆ ನಡೆಸಲು ಕೋವಿಡ್ ನಮ್ಮ ಮುಂದಿರುವ ದೊಡ್ಡ ಸವಾಲು. ಕೋವಿಡ್ ಭಯದಿಂದ ಮತದಾರರು ಮತಗಟ್ಟೆಗೆ ಮತ ಚಲಾಯಿಸಲು ಬರಬಹುದೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಕೂಡಾ ಈ ಬಗ್ಗೆ ಆತಂಕ ಹೊರಹಾಕಿದ್ದಾರೆ. ಚುನಾವಣೆಗೆ ಸಿದ್ಧತೆಯ ಜೊತೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಮತಗಟ್ಟೆಗೆ ಬರುವಂತೆ ಮಾಡಲು ಏನೇನು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಹಲವು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿವೆ. ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಇನ್ನೂ ಹಬ್ಬುತ್ತಿದೆ. ಇಂತಹ ಪರಿಸ್ಥಿತಿ ಯಲ್ಲಿ ಈ ಜಿಲ್ಲೆಗಳಲ್ಲಿ ಚುನಾವಣೆ ನಡೆಸಲು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸವಾಲು ನಮ್ಮ ಮುಂದಿದೆ. ಚುನಾವಣೆ ಸಂದರ್ಭದಲ್ಲಿ ಈ ಜಿಲ್ಲೆಗಳಲ್ಲಿ ಏನೇನು ಸಮಸ್ಯೆಗಳು ಎದುರಾಗಬಹುದು ಎಂಬ ಬಗ್ಗೆಯೂ ಅಭಿಪ್ರಾಯಗಳನ್ನು ಪಡೆಯಲಾಗುವುದು. ಸಮಸ್ಯೆ ಎದುರಾದಲ್ಲಿ ಪರಿಹಾರಕ್ಕೂ ಸೂಚಿಸಲಾಗುವುದು ಚುನಾವಣಾ ಆಯುಕ್ತ ಬಸವರಾಜು ತಿಳಿಸಿದರು.
ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಶೀಘ್ರ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್ಗೆ ಮೊರೆ ಹೋಗಿದ್ದ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಕೆ.ಸಿ. ಕೊಂಡಯ್ಯ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ , ಮೂರು ವಾರಗಳಲ್ಲಿ ಚುನಾವಣೆಯ ದಿನಾಂಕ ಪ್ರಕಟಿಸುವಂತೆ ಆಯೋಗಕ್ಕೆ ನಿರ್ದೇಶನ ನೀಡಿದೆ.
ನ್ಯಾಯಾಲಯದ ಆದೇಶದಂತೆ ಚುನಾವಣೆ ವೇಳಾಪಟ್ಟಿ ಪ್ರಕಟಿಸಲು ನಿರ್ಧರಿಸಿದ್ದೇವೆ. ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ಬಳಿಕವಷ್ಟೇ ದಿನಾಂಕ ಘೋಷಣೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel